ಉದಯವಾಹಿನಿ, ಕೋಲ್ಕತ್ತಾ: ದೀಪಾವಳಿಗೆ ಸಸ್ಯಾಹಾರ ಆರ್ಡರ್ ಮಾಡಿದ ಪಶ್ಚಿಮ ಬಂಗಾಳದ ವ್ಯಕ್ತಿಗೆ ತಂದೂರಿ ಚಿಕನ್ ಕಳುಹಿಸಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಬಿಧಾನ್‌ನಗರದಲ್ಲಿ ವಾಸಿಸುವ ಸುಮಿತ್ ಅಗರ್ವಾಲ್ ಎಂಬವರು ತಮಗಾದ ಈ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಫಾರ್ಚೂನ್ 500 ಕಂಪನಿಗಳ ಡೈವರ್ಸಿಟಿ, ಇಕ್ವಿಟಿ ಮತ್ತು ಇನ್ಕ್ಲೂಷನ್ ಸಲಹೆಗಾರರಾದ ಸುಮಿತ್ ಅಗರ್ವಾಲ್, ದೀಪಾವಳಿಯಂದು ತಮ್ಮ ಕುಟುಂಬಕ್ಕೆ ಯಾವ ರೀತಿಯ ಭಾವನಾತ್ಮಕ ಆಘಾತ ಉಂಟಾಯಿತು ಎಂಬುದನ್ನು ಲಿಂಕ್ಡ್ ಇನ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.
ಅಗರ್ವಾಲ್ ರಂಗ್ ದೇ ಬಸಂತಿ ಡಾಬಾದಿಂದ ಸಸ್ಯಾಹಾರವನ್ನು ಆರ್ಡರ್ ಮಾಡಿದ್ದರಂತೆ. ಆದರೆ ಅದರ ಬದಲು ಪಡೆದಿದ್ದು ಮಾತ್ರ ತಂದೂರಿ ಚಿಕನ್ ಆಗಿತ್ತು ಎಂದು ಹೇಳಿದ್ದಾರೆ. ಇದನ್ನು ನೋಡಿ ತಮ್ಮ ತಾಯಿ ಶಾಕ್ ಆದರು ಎಂದು ಅಗರವಾಲ್ ವಿವರಿಸಿದ್ದಾರೆ. ಸ್ವಿಗ್ಗಿ ಮೂಲಕ ಮಟರ್ ಮಶ್ರೂಮ್ ಅನ್ನು ಆರ್ಡರ್ ಮಾಡಿದ್ದಾಗಿ ಬರೆದಿದ್ದಾರೆ. ಆದರೆ, ಪ್ಯಾಕೆಟ್‌ನಲ್ಲಿ ತಂದೂರಿ ಚಿಕನ್ ಕ್ಲಾಸಿಕ್ ಅನ್ನು ಕಂಡು ಆಘಾತಕ್ಕೊಳಗಾದರು. ಇದು ಕೇವಲ ವಿತರಣಾ ತಪ್ಪಲ್ಲ. ಇದು ಭಾವನಾತ್ಮಕ ಆಘಾತ ಎಂದು ಅವರು ಬರೆದಿದ್ದಾರೆ.
ಮದುವೆಯಾದಗಿನಿಂದಲೂ ಕಟ್ಟುನಿಟ್ಟಿನ ಸಸ್ಯಾಹಾರಿಯಾಗಿದ್ದ ತನ್ನ ತಾಯಿ ದೀಪಾವಳಿ ಪೂಜೆಯ ನಂತರ ಊಟದ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಅವರು ಆಘಾತಗೊಂಡರು ಎಂದು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಆಹಾರವು ಅನೇಕ ಜನರಿಗೆ ಕೇವಲ ರುಚಿಗೆ ಸಂಬಂಧಿಸಿದ್ದಲ್ಲ. ಅದು ನಂಬಿಕೆ, ಶುದ್ಧತೆ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದೆ ಎಂದು ಅಗರ್ವಾಲ್ ಹೇಳಿದರು.
ಕೆಲವೊಮ್ಮೆ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ದಾಟಿದಾಗ ಅವು ಹೇಗೆ ಆಳವಾಗಿ ನೋವುಂಟು ಮಾಡಬಹುದು ಎಂಬ ಬಗ್ಗೆ ಅವರು ಮಾತನಾಡಿದರು. ಹಾಗಂತ ಇದು ಕೋಪವನ್ನು ತೋರಿಸುವುದೆಂದಲ್ಲ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ನಂಬಿಕೆ ಮತ್ತು ಆಹಾರವು ಬಹಳ ವೈಯಕ್ತಿಕವಾಗಿದೆ. ಬೇರೆ ಯಾವುದೇ ಕುಟುಂಬವು ಇದೇ ರೀತಿಯ ತೊಂದರೆಯನ್ನು ಅನುಭವಿಸಬಾರದು. ಇದಕ್ಕಾಗಿ ತಾನು ಈ ಬಗ್ಗೆ ಪೋಸ್ಟ್ ಮಾಡಿದ್ದಾಗಿ ತಿಳಿಸಿದರು.
