ಉದಯವಾಹಿನಿ, ನವದೆಹಲಿ: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಸಂಸತ್ ಆವರಣದಲ್ಲಿ ಆಚರಿಸಲಾಯಿತು. ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿರುವ ಚೆನ್ನಮ್ಮ ಪ್ರತಿಮೆಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ, ರಾಣಿ ಚೆನ್ನಮ್ಮನವರ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ 2007ರಲ್ಲಿ ಸ್ಥಾಪಿಸಲಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಬಲ ಮತ್ತು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರ ಸಹಕಾರದಿಂದ 200ನೇ ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಸಹ ರಾಣಿ ಚೆನ್ಮಮ್ಮನವರ 201ನೇ ವಿಜಯೋತ್ಸವ ಮತ್ತು ಜನ್ಮದಿನೋತ್ಸವ ಆಚರಣೆಯನ್ನು ಸಂಸತ್ತಿನ ಅವರಣದ ಪ್ರೇರಣಾ ಸ್ಥಳದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕದ ಸಂಸ್ಕೃತಿ, ಈ ದೇಶಕ್ಕೆ ಕೊಡುಗೆ ನೀಡಿದ ಕನ್ನಡದ ಮಹನೀಯರನ್ನು, ಸ್ವಾತಂತ್ರ‍್ಯ ಹೋರಾಟಗಾರರನ್ನು, ವೀರವನಿತೆಯರನ್ನು ನೆನಪಿಸುವ ಮತ್ತು ಅವರನ್ನು ಗೌರವಿಸುವ ಕೆಲಸ ಮಾಡುವಲ್ಲಿ ಸದಾ ಸನ್ನದ್ಧವಾಗಿದೆ. ಇದಕ್ಕೆ ಪೂರಕವಾಗಿಯೇ ನಾಳೆ ಸಿರಿಪೋರ್ಟ ಆಡಿಟೋರಿಯಂನಲ್ಲಿ ನಡೆಯಲಿರುವ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವೀರರಾಣಿ ಚೆನ್ಮಮ್ಮನವರ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!