ಉದಯವಾಹಿನಿ, ನವದೆಹಲಿ: ಭಾರತೀಯ ವ್ಯಕ್ತಿಯನ್ನು ರಷ್ಯಾ ಬಲವಂತವಾಗಿ ಯುದ್ಧಕ್ಕೆ ಬಳಸಿಕೊಳ್ಳುತ್ತಿದೆ ಮತ್ತೊಂದು ಆರೋಪ ಕೇಳಿಬಂದಿದೆ. ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ರಷ್ಯಾಗೆ ತೆರಳಿದ್ದ ತನ್ನನ್ನು ಉಕ್ರೇನ್ ವಿರುದ್ಧ ಯುದ್ಧ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೊ ಮೂಲಕ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಹೌದು.. ರಷ್ಯಾದಲ್ಲಿ ಸಿಲುಕಿರುವ ಹೈದರಾಬಾದ್ ಮೂಲದ 37 ವರ್ಷದ ಮೊಹಮ್ಮದ್ ಅಹ್ಮದ್ ಎಂಬಾತನನ್ನು ರಕ್ಷಿಸುವಂತೆ ಅವರ ಪತ್ನಿ ಅಫ್ಶಾ ಬೇಗಂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಗೆ ಪತ್ರ ಬರೆದಿದ್ದಾರೆ. ಅಹ್ಮದ್ ಪತ್ನಿ ಪ್ರಕಾರ, ಮುಂಬೈ ಮೂಲದ ಕನ್ಸಲ್ಟನ್ಸಿ ಕಂಪನಿಯೊಂದು ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿತ್ತು. ಅದರಂತೆ ಅಮಹ್ಮದ್ ಏಪ್ರಿಲ್ 2025ರಂದು ಭಾರತದಿಂದ ರಷ್ಯಾಗೆ ತೆರಳಿದ್ದರು. ಒಂದು ತಿಂಗಳೂ ಯಾವುದೇ ಕೆಲಸ ನೀಡದೇ ಹಾಗೆ ಕೂರಿಸಿ ಬಳಿಕ, ಇತರೆ 30 ಜನರೊಂದಿಗೆ ದೂರದ ಪ್ರದೇಶಕ್ಕೆ ಸ್ಥಳಾಂತರಿಸಿ ಬಲವಂತವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ. ತರಬೇತಿ ಬಳಿಕ 26 ಜನರನ್ನು ಉಕ್ರೇನ್ ವಿರುದ್ಧ ಹೋರಾಡಲು ಗಡಿ ಪ್ರದೇಶಕ್ಕೆ ಕರೆದೊಯ್ಯುವಾಗ ಅಹ್ಮದ್ ಸೇನಾ ವಾಹನದಿಂದ ಹಾರಿದ್ದಾರೆ. ಈ ವೇಳೆ ಅವರ ಬಲಗಾಲಿನ ಮೂಳೆ ಮೂರಿದು ಗಾಯಗೊಂಡಿದ್ದರೂ ಯುದ್ಧ ಮಾಡು ಇಲ್ಲವಾದರೆ ಸಾಯಲು ಸಿದ್ಧನಾಗು ಎಂದು ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಮನೆಗೆ ಅವರೇ ಆಧಾರ ಸ್ಥಂಬವಾಗಿದ್ದು, ದಯವಿಟ್ಟು ಅವರನ್ನು ರಕ್ಷಿಸಲು ಸಹಾಯ ಮಾಡಿ ಎಂದು, ಅಹ್ಮದ್ ಪತ್ನಿ ಅಫ್ಶಾ ಬೇಗಂ ಪತ್ರದಲ್ಲಿ ತಿಳಿಸಿದ್ದಾರೆ.
