ಉದಯವಾಹಿನಿ, ವಾಷಿಂಗ್ಟನ್, ಅಮೆರಿಕ: ಪಾಕಿಸ್ತಾನದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿಯು ಅಮೆರಿಕವನ್ನು ಗುರಿಯಾಗಿಸುವ ಸಾಮರ್ಥ್ಯ ಇರುವ ಕ್ಷಿಪಣಿಗಳನ್ನು ಒಳಗೊಂಡಿರಬಹುದು ಎಂದು ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್  ತಿಳಿಸಿದ್ದಾರೆ.
ಸೆನೆಟ್ ಗುಪ್ತಚರ ಸಮಿತಿಯ ಮುಂದೆ ಸಾಕ್ಷ್ಯ ನುಡಿದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಗಬ್ಬಾರ್ಡ್, 2035 ರ ವೇಳೆಗೆ ಅಮೆರಿಕಕ್ಕೆ ಈಗಿರುವ 3,000 ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಅದು ಸುಮಾರು 16,000 ಕ್ಕೂ ಹೆಚ್ಚು ಕ್ಷಿಪಣಿಗಳಿಗೆ ವಿಸ್ತರಿಸಲಿವೆ ಎಂದು ಹೇಳಿದ್ದಾರೆ.
ಇಂತಹ ಬೆದರಿಕೆಗಳ ವಿರುದ್ಧ ತಾಯ್ನಾಡಿನಲ್ಲಿ ಸುರಕ್ಷತೆ ಖಚಿತಪಡಿಸಿಕೊಳ್ಳಲು ಅಮೆರಿಕದ ಸುರಕ್ಷಿತ ಪರಮಾಣು ಪ್ರತಿರೋಧ ವ್ಯವಸ್ಥೆ ಬಲಪಡಿಸುವ ಪ್ರಯತ್ನಗಳು ಮುಂದುವರೆದಿದೆ. ಆದರೆ, ರಷ್ಯಾ, ಚೀನಾ, ಉತ್ತರ ಕೊರಿಯಾ, ಇರಾನ್ ಮತ್ತು ಪಾಕಿಸ್ತಾನಗಳು ನಮ್ಮ ತಾಯ್ನಾಡನ್ನು ಗುರಿಯಾಗಿಸುವ ಪರಮಾಣು ಮತ್ತು ಸಾಂಪ್ರದಾಯಿಕ ಪೇಲೋಡ್‌ಗಳನ್ನು ಹೊಂದಿರುವ ನವೀನ, ಮುಂದುವರಿದ ಅಥವಾ ಸಾಂಪ್ರದಾಯಿಕ ಕ್ಷಿಪಣಿ ವಿತರಣಾ ವ್ಯವಸ್ಥೆಗಳ ಶ್ರೇಣಿಯನ್ನು ಸಂಶೋಧಿಸಿ ಅಭಿವೃದ್ಧಿಪಡಿಸುತ್ತಿವೆ ಎಂದು ಗಬ್ಬಾರ್ಡ್ ತಿಳಿಸಿದ್ದಾರೆ.

2035ರ ವೇಳೆಗೆ ಒಟ್ಟಾರೆಯಾಗಿ 16,000 ಕ್ಕೂ ಹೆಚ್ಚು ಕ್ಷಿಪಣಿಗಳು ಅಮೆರಿಕವನ್ನು ಗುರಿಯಾಗಿಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಗುಪ್ತಚರ ಸಮುದಾಯ (ಐಸಿ) ಅಂದಾಜಿಸಿದೆ ಎಂದು ಗಬ್ಬಾರ್ಡ್​ ಅಮೆರಿಕ ಕಾಂಗ್ರೆಸ್​ಗೆ ತಿಳಿಸಿದ್ದಾರೆ. ಪ್ರಸ್ತುತ ಅಂದಾಜು 3,000 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಅಮೆರಿಕ ಗುರಿಯಾಗಿಸಿಕೊಂಡು ರೆಡಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಚೀನಾ ರಷ್ಯಾಕ್ಕಿದೆ ಅಮೆರಿಕ ರಕ್ಷಣಾ ವ್ಯವಸ್ಥೆ ಭೇದಿಸುವ ಸಾಮರ್ಥ್ಯ: ಚೀನಾ ಮತ್ತು ರಷ್ಯಾ ಅಮೆರಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಅಥವಾ ಬೈಪಾಸ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಸುಧಾರಿತ ವಿತರಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಐಸಿ ಅಂದಾಜಿಸಿದೆ ಎಂದು ಗಬ್ಬಾರ್ಡ್ ಹೇಳಿದರು.

ಉತ್ತರ ಕೊರಿಯಾದ ಐಸಿಬಿಎಂಗಳು ಈಗಾಗಲೇ ಯುಎಸ್ ನೆಲವನ್ನು ತಲುಪಬಹುದು ಮತ್ತು ಅದು ತನ್ನ ಪರಮಾಣು ಶಸ್ತ್ರಾಗಾರವನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಅಮೆರಿಕದ ಉನ್ನತ ಗುಪ್ತಚರ ಅಧಿಕಾರಿ ಹೇಳಿದ್ದಾರೆ. ಪಾಕಿಸ್ತಾನದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿಯು, ಅಮೆರಿಕದ ನೆಲವನ್ನು ತಲುಪುವ ಸಾಮರ್ಥ್ಯ ಹೊಂದಿರುವ ಐಸಿಬಿಎಂಗಳನ್ನು ಒಳಗೊಂಡಿರಬಹುದು ಎಂದು ಗಬ್ಬಾರ್ಡ್ ಹೇಳಿದರು. ಟೆಹ್ರಾನ್ ಸಹ 2035ರ ಮೊದಲು ಮಿಲಿಟರಿ ಕಾರ್ಯಸಾಧ್ಯವಾದ ಐಸಿಬಿಎಂ ಅಭಿವೃದ್ಧಿಪಡಿಸಲು ಈ ಹಿಂದೆ ಬಾಹ್ಯಾಕಾಶ ಉಡಾವಣೆ ಮತ್ತು ಇತರ ತಂತ್ರಜ್ಞಾನವನ್ನು ಪ್ರದರ್ಶಿಸಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!