ಉದಯವಾಹಿನಿ, ಜೇರುಸೆಲಂ: ಇರಾನ್ ವಿರುದ್ಧದ ಯುದ್ದ ತೀವ್ರಗೊಳಿಸಿರುವ ಇಸ್ರೇಲ್, ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇರಾನಿನ ಪ್ರಮುಖ ಅನಿಲ ತಾಣಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ತಿಳಿಸಿದೆ.
ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತೀಕಾರವಾಗಿ ಇರಾನ್, ಗಲ್ಫ್ ದೇಶಗಳ ತೈಲ ಮತ್ತು ನೈಸರ್ಗಿಕ ಅನಿಲ ಸೌಲಭ್ಯಗಳ ಮೇಲೆ ದಾಳಿ ತೀವ್ರಗೊಳಿಸಿದೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದು, ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಬೆನ್ನಲ್ಲೇ ಇಸ್ರೇಲ್, ಇರಾನ್ ತೈಲ ಸೌಲಭ್ಯಗಳಿಂದ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಇಂದು ಕೂಡ ಇರಾನ್ ಇಸ್ರೇಲ್ ಮೇಲೆ ದಾಳಿ ಮುಂದುವರೆಸಿದ್ದು, ಲಕ್ಷಾಂತರ ಜನರನ್ನು ಆಶ್ರಯ ತಾಣಗಳಿಗೆ ಕಳುಹಿಸಲಾಗಿದೆ. ಹೈಫಾದಿಂದ ಗೆಲಿಲಿವರೆಗೆ ಲೆಬನಾನ್ ಗಡಿಯವರೆಗೆ ಎಚ್ಚರಿಕೆಯ ಸೈರನ್‌ಗಳು ಮೊಳಗಿದವು. ಗುರುವಾರ ಒಂದೇ ದಿನದಲ್ಲಿ ಇಸ್ರೇಲ್ನಲ್ಲಿ 12ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಶುಕ್ರವಾರ ಇರಾನಿಯನ್ನರು ನೌರುಜ್ ಅಥವಾ ಪರ್ಷಿಯನ್ ಹೊಸ ವರ್ಷವನ್ನು ಆಚರಿಸುತ್ತಿದ್ದಂತೆ ಇಸ್ರೇಲ್ ಮುಂಜಾನೆ ಟೆಹ್ರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಾಗತಿಕ ತೈಲ ಪೂರೈಕೆ ಬಿಕ್ಕಟ್ಟು ಎದುರಾಗಿದೆ. ಇಸ್ರೇಲ್ ತನ್ನ ದಕ್ಷಿಣ ಪಾರ್ಸ್ ಅನಿಲ ಘಟಕದ ಮೇಲಿನ ದಾಳಿಗೆ ಪ್ರತೀಕಾರವಾಗಿ ಇರಾನ್, ಕತಾರ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಇಂಧನ ಬೆಲೆ ಏರಿಕೆ ಕಂಡಿದೆ. ಅಲ್ಲದೇ ಇರಾನ್ ಸುತ್ತಮುತ್ತಲಿನ ಅರಬ್ ದೇಶಗಳನ್ನು ನೇರವಾಗಿ ಸಂಘರ್ಷಕ್ಕೆ ಎಳೆಯುವ ಅಪಾಯವನ್ನು ಹೆಚ್ಚಿಸಿದೆ.
ಗುರುವಾರ ಈ ಬಗ್ಗೆ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋರಿಕೆಯ ಮೇರೆಗೆ ಇಸ್ರೇಲ್ ಕಡಲಾಚೆಯ ಅನಿಲ ಕ್ಷೇತ್ರದ ಮೇಲೆ ಯಾವುದೇ ದಾಳಿ ನಡೆಸುವುದಿಲ್ಲ ಎಂದು ತಿಳಿಸಿದೆ.
ಸಂಘರ್ಷದಲ್ಲಿ ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ಕರಾವಳಿಯಲ್ಲಿ ಒಂದು ಹಡಗು ಬೆಂಕಿಗೆ ಆಹುತಿಯಾಗಿದ್ದು, ಮತ್ತೊಂದು ಕತಾರ್ ಬಳಿ ಹಾನಿಗೊಳಗಾಗಿದೆ. ಹಾರ್ಮುಜ್ ಜಲಸಂಧಿಯನ್ನು ಪ್ರಯತ್ನಗಳು ಕೂಡ ಹಡುಗುಗಳಿಗೆ ಸಾಕಷ್ಟು ಒತ್ತಡ ತಂದಿಟ್ಟಿದೆ. ಇರಾನ್ನ ಡ್ರೋನ್ ಕೆಂಪು ಸಮುದ್ರದಲ್ಲಿರುವ ಸೌದಿ ಸಂಸ್ಕರಣಾಗಾರಕ್ಕೆ ಡಿಕ್ಕಿ ಹೊಡೆದಿದೆ.
