ಉದಯವಾಹಿನಿ, ಕತಾರ್‌ನ ಅತಿದೊಡ್ಡ ಅನಿಲ ಉತ್ಪಾದಕ ಕೇಂದ್ರವಾಗಿರುವ ರಾಸ್ ಲಫಾನ್ ಕೈಗಾರಿಕಾ ನಗರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಿಂದಾಗಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ರಫ್ತು ಸಾಮರ್ಥ್ಯವನ್ನು ಶೇಕಡಾ 17 ರಷ್ಟು ಕಡಿತಗೊಳಿಸಿದೆ. ಭಾರತಕ್ಕೆ ಎಲ್‌ಎನ್‌ಜಿ ಪೂರೈಕೆಯಲ್ಲಿ ಕತಾರ್ ಪ್ರಮುಖವಾಗಿರುವುದರಿಂದಾಗಿ ಇದು ಭಾರತದ ಇಂಧನ ಪೂರೈಕೆ ಮತ್ತಷ್ಟು ಒತ್ತಡಕ್ಕೆ ಒಳಗಾಗಲಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ಮತ್ತು ಲಭ್ಯತೆ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.
ರಾಸ್ ಲಫಾನ್ ಕೈಗಾರಿಕ ನಗರದ ಮೇಲೆ ಕ್ಷಿಪಣಿ ದಾಳಿಯ ಹಾನಿ ಕುರಿತು ಮಾಹಿತಿ ಹಂಚಿಕೊಂಡಿರುವ ಕತಾರ್ ಎನರ್ಜಿಯ ಅಧ್ಯಕ್ಷ ಮತ್ತು ಸಿಇಒ ಇಂಧನ ವ್ಯವಹಾರಗಳ ರಾಜ್ಯ ಸಚಿವ ಸಾದ್ ಶೆರಿದಾ ಅಲ್-ಕಾಬಿ, ಕ್ಷಿಪಣಿ ದಾಳಿಯು ಕತಾರ್‌ನ ಎಲ್‌ಎನ್‌ಜಿ ರಫ್ತು ಸಾಮರ್ಥ್ಯವನ್ನು ಶೇ 17 ರಷ್ಟು ಕಡಿಮೆ ಮಾಡಿದೆ. ವಾರ್ಷಿಕ ಆದಾಯದಲ್ಲಿ 20 ಬಿಲಿಯನ್ ಡಾಲರ್ ನಷ್ಟವನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ. ಕತಾರ್ ಅನಿಲ ಉತ್ಪಾದನಾ ಸಾಮರ್ಥ್ಯದ ಮೇಲೆ ಹೆಚ್ಚಿನ ಹಾನಿಯಾಗಿದ್ದು, ಇದರಿಂದ ಚೇತರಿಸಿಕೊಳ್ಳಲು ಐದು ವರ್ಷ ಬೇಕಾಗಬಹುದು. ಈ ದಾಳಿಯಿಂದಾಗಿ ಚೀನಾ, ದಕ್ಷಿಣ ಕೊರಿಯಾ, ಇಟಲಿ, ಬೆಲ್ಜಿಯಂ ಮೇಲೆ ಪರಿಣಾಮ ಬೀರಲಿದೆ. ಕೆಲವು ದೀರ್ಘಾವಧಿಯ ಎಲ್‌ಎನ್‌ಜಿ ಒಪ್ಪಂದಗಳ ಮೇಲೆ ಐದು ವರ್ಷಗಳವರೆಗೆ ಫೋರ್ಸ್ ಮೇಜರ್ ಘೋಷಿಸಲು ಒತ್ತಾಯಿಸುತ್ತಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ 19ರಂದು ಮುಂಜಾನೆ ರಾಸ್ ಲಫಾನ್ ಕೈಗಾರಿಕಾ ನಗರದ ಮೇಲೆ ಕ್ಷಿಪಣಿ ದಾಳಿಯನ್ನು ಕತಾರ್ ಎನರ್ಜಿ ಎದುರಿಸಿದೆ. ಇದರಿಂದಾಗಿ 20 ಬಿಲಿಯನ್ ಡಾಲರ್ ನಷ್ಟ ಉಂಟಾಗಿದ್ದು, ಇದನ್ನು ದುರಸ್ಥಿ ಮಾಡಲು ಐದು ವರ್ಷಗಳಷ್ಟು ಸಮಯ ಬೇಕಾಗುತ್ತದೆ. ಈ ದಾಳಿಯು ಯುರೋಪ್ ಮತ್ತು ಏಷ್ಯಾ ಮಾರುಕಟ್ಟೆಯ ಪೂರೈಕೆ ಮೇಲೆ ಅಡಚಣೆ ಉಂಟುಮಾಡಲಿದೆ ಎಂದು ಕತಾರ್ ಎನರ್ಜಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ಅದೃಷ್ಟವಶಾತ್, ಈ ದಾಳಿಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ. ಈ ಅನ್ಯಾಯ ಮತ್ತು ಅವಿವೇಕದ ದಾಳಿಯಲ್ಲಿ ಯಾರು ಗಾಯಗೊಂಡಿಲ್ಲ. ಇದು ಕೇವಲ ಕತಾರ್ ಮೇಲಿನ ದಾಳಿಯಲ್ಲ, ಜಾಗತಿಕ ಇಂಧನ ಭದ್ರತೆ ಮತ್ತು ಸ್ಥಿರತೆ ಮೇಲಿನ ದಾಳಿಯಾಗಿದೆ. ಇದು ನ್ಯಾಯಯುತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಇಂಧನ ಪ್ರವೇಶದಿಂದ ಸುಸ್ಥಿರವಾದ ಅಭಿವೃದ್ಧಿ ಮತ್ತು ಮಾನವ ಪ್ರಗತಿಗಾಗಿ ನಿಲ್ಲುವ ನಮ್ಮೆಲ್ಲರ ಮೇಲೆ ನಡೆದ ದಾಳಿಯಾಗಿದೆ.
