ಉದಯವಾಹಿನಿ, ಟೆಹ್ರಾನ್, ಇರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ – IRGC ಇಸ್ರೇಲ್ ವಿರುದ್ಧ ಹೊಸ ದಾಳಿಗಳನ್ನು ಕೈಗೊಂಡಿದೆ. ಟೆಲ್ ಅವೀವ್ ಸೇರಿದಂತೆ ಮಧ್ಯ ಮತ್ತು ದಕ್ಷಿಣ ಇಸ್ರೇಲ್‌ನ ಪ್ರದೇಶಗಳು ಹಾಗೂ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಐಆರ್ ಜಿಸಿ ದಾಳಿ ಆರಂಭಿಸಿದೆ ಎಂದು ಫಾರ್ಸ್ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.
ಇಸ್ರೇಲ್ ರಕ್ಷಣಾ ಪಡೆಗಳು, ಇರಾನ್ ಟೆಲ್ ಅವಿವ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿದೆ ಎಂಬುದನ್ನು ದೃಢಪಡಿಸಿದೆ. ಇರಾನ್ ದಾಳಿಯಿಂದ ರಕ್ಷಣೆ ಮಾಡಿಕೊಳ್ಳಲು ಅಲ್ಲಿನ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯಪ್ರವೃತ್ತವಾದವು. ಕ್ಷಿಪಣಿ ನಿರೋಧಕಗಳಿಂದ ಆ ದಾಳಿಯನ್ನು ತಡೆಯುವ ಎಲ್ಲ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಐಡಿಎಫ್ ಹಂಚಿಕೊಂಡ ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ.
ಅಧಿಕಾರಿಗಳು ಕ್ಷಿಪಣಿ ದಾಳಿ ನಡೆಯುತ್ತಿರುವ ಪ್ರದೇಶಗಳಲ್ಲಿನ ನಾಗರಿಕರಿಗೆ ತುರ್ತು ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ. ಹೋಮ್ ಫ್ರಂಟ್ ಕಮಾಂಡ್ ನೇರವಾಗಿ ಮೊಬೈಲ್ ಫೋನ್‌ಗಳಿಗೆ ಪ್ರಾಥಮಿಕ ನಿರ್ದೇಶನಗಳನ್ನು ರವಾನಿಸಿದ್ದು, ನಿವಾಸಿಗಳು ತಕ್ಷಣ ಸಂರಕ್ಷಿತ ಸ್ಥಳಗಳಿಗೆ ತೆರಳುವಂತೆ ಅದರಲ್ಲಿ ಮನವಿ ಮಾಡಲಾಗಿದೆ.
ಬೆದರಿಕೆಗಳನ್ನು ತಡೆಯಲು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಕೆಲವು ನಿಮಿಷಗಳಲ್ಲಿ ಹೋಮ್ ಫ್ರಂಟ್ ಕಮಾಂಡ್ ಸಂಬಂಧಿತ ಪ್ರದೇಶಗಳಲ್ಲಿನ ಮೊಬೈಲ್ ಫೋನ್‌ಗಳಿಗೆ ನೇರವಾಗಿ ಪ್ರಾಥಮಿಕ ನಿರ್ದೇಶನಗಳನ್ನು ರವಾನಿಸಿದೆ. ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಲು ಮತ್ತು ನಿರ್ದೇಶನಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ. ಸ್ಪಷ್ಟ ನಿರ್ದೇಶನ ನೀಡುವವರೆಗೆ ನಾಗರಿಕರು ಸಂರಕ್ಷಿತ ಪ್ರದೇಶಗಳಿಂದ ಹೊರಗೆ ಬರಬಾರದು ಎಂದು ಐಡಿಎಫ್ ಮನವಿ ಮಾಡಿದೆ. ಅಮೆರಿಕ – ಇಸ್ರೇಲ್ ವಿರುದ್ಧ ಪೆಜೆಶ್ಕಿಯಾನ್ ವಾಗ್ದಾಳಿ: ಏತನ್ಮಧ್ಯೆ, ಇರಾನ್ ವಿರುದ್ಧದ ಅಮೆರಿಕದ ಆಕ್ರಮಣ ಹಾಗೂ ಮಾಜಿ ಸರ್ವೋಚ್ಚ ನಾಯಕನ ಹತ್ಯೆ ವಿಶ್ವದ ಕಾನೂನು ವ್ಯವಸ್ಥೆಗಳನ್ನು ಹಾಳುಗೆಡವಲು ಮಾಡುತ್ತಿರುವ ದಾಳಿಯಾಗಿದೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಆರೋಪಿಸಿದ್ದಾರೆ.
