ಉದಯವಾಹಿನಿ, ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಚುನಾವಣಾ ಪ್ರಚಾರ ಕಣ ಬಿರುಸಾಗಲಿದೆ.
ಈ ನಡುವೆ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ನೇತೃತ್ವದ ಎನ್‌ಡಿಎ ಒಕ್ಕೂಟ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಪ್ರಯತ್ನದಲ್ಲಿದ್ದರೆ, ಮತ್ತೊಂದು ಆರ್‌ಜೆಡಿ ನೇತೃತ್ವದ ಇಂಡಿಯಾ ಒಕ್ಕೂಟ ಎನ್‌ಡಿಎ ಮಣಿಸುವ ಲೆಕ್ಕಚಾರದಲ್ಲಿದೆ. ಈ ನಡುವೆ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರ ಜನ್ ಸ್ವರಾಜ್ ಪಕ್ಷವೂ ಅಧಿಕಾರ ಹಿಡಿಯುವ ಹುರುಪುನಲ್ಲಿದ್ದು ಚುನಾವಣೆಗೆ ಹತ್ತಾರು ಭರವಸೆಗಳನ್ನು ನೀಡಿವೆ. ಆರ್‌ಜೆಡಿ ನೇತೃತ್ವದ ಇಂಡಿಯಾ ಮೈತ್ರಿಕೂಟವೂ ಜೀವಿಕಾ ಕಾರ್ಮಿಕರಿಗೆ ತಿಂಗಳಿಗೆ 30,000 ರೂ. ವೇತನ ಹಾಗೂ ಖಾಯಂ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದೆ. ಅಲ್ಲದೇ ಪ್ರತಿ ಮನೆಗೆ ಸರ್ಕಾರಿ ಕೆಲಸ ನೀಡುವ ಭರವಸೆಯನ್ನು ತೇಜಸ್ವಿ ಯಾದವ್ ನೀಡಿದ್ದಾರೆ. ‘ಮಾಯಿ ಬಹಿನ್ ಮಾನ್ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 2,500 ರೂ. ನೆರವು, ಮೀಸಲಾತಿ ಪ್ರಸ್ತುತ ಶೇ. 50 ರಷ್ಟು ಮಿತಿ ಹೆಚ್ಚಿಸುವುದು ಮತ್ತು ಬಿಹಾರದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದೆ.
ಎನ್‌ಡಿಎ ಒಕ್ಕೂಟವು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಜಾರಿ ಮಾಡಿದೆ. ಇದರ ಮೂಲಕ ವ್ಯವಹಾರಗಳನ್ನು ಪ್ರಾರಂಭಿಸಲು ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುವುದು. ಇದರ ಭಾಗವಾಗಿ ಈಗಾಗಲೇ ಆರಂಭಿಕ 10,000 ರೂ. ಅನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತದೆ. ಜೊತೆಗೆ ಕೃಷಿ, ಕರಕುಶಲ ವಸ್ತುಗಳು, ಟೈಲರಿಂಗ್ ಇತ್ಯಾದಿಗಳಿಗೆ 2 ಲಕ್ಷದವರೆಗೆ ಹೆಚ್ಚುವರಿ ನೀಡಲಾಗುತ್ತದೆ.
