ಉದಯವಾಹಿನಿ, ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಅವರ ಮನವಿ ಮೇರೆಗೆ ಭಾರತ, ರಷ್ಯಾದಿಂದ ತೈಲ ಖರೀದಿ ವಿಚಾರದಿಂದ ಹಿಂದೆ ಸರಿಯಲಿದೆ ಎಂದು ಶ್ವೇತಭವನ ತಿಳಿಸಿದೆ. ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಗುರುವಾರ ಈ ಬಗ್ಗೆ ಮಾತನಾಡಿದ್ದು, ನೀವು ರಷ್ಯಾದ ಮೇಲಿನ ನಿರ್ಬಂಧಗಳನ್ನು ನೋಡಿದರೆ ಮತ್ತು ಓದಿದರೆ, ಅವು ತುಂಬಾ ಭಾರವಾಗಿವೆ ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳಾದ ರೊಸ್ನೆಫ್ಟ್​​ ಮತ್ತು ಲುಕ್ಆಯಿಲ್​ ಮೇಲೆ ಅಮೆರಿಕದ ನಿರ್ಬಂಧವನ್ನು ಉಲ್ಲೇಖಿಸಿ ಮಾತನಾಡಿದ ಅವರು, ರಷ್ಯಾ ಮತ್ತು ಉಕ್ರೇನ್​ ಯುದ್ಧದನ ನಡುವೆ ಮಾಸ್ಕೋಗೆ ಆದಾಯದ ಹರಿವು ಕಡಿತಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಕೆಲವು ಅಂತಾರಾಷ್ಟ್ರೀಯ ಸುದ್ದಿಗಳಲ್ಲಿ ಕೂಡ ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಚೀನಾ ಹಿಂದೆ ಸರಿಯಲಿದೆ ಎಂಬ ವರದಿ ನೋಡಿದೆ. ಭಾರತ ಕೂಡ ಅಮೆರಿಕ ಅಧ್ಯಕ್ಷರ ಮನವಿ ಮೇರೆಗೆ ತೈಲ ಖರೀದಿಯಿಂದ ಹಿಂದೆ ಸರಿಯಲಿದೆ ಎಂಬುದು ನಮಗೆ ತಿಳಿದಿದೆ ಎಂದರು.
ಆಕ್ರಮಣಕಾರಿ ಮಾರ್ಗದ ತಂತ್ರ: ಇದೇ ವೇಳೆ ಲೀವಿಟ್​​​ ಯುರೋಪಿಯನ್​ ರಾಷ್ಟ್ರಗಳಿಗೂ ಕೂಡ ರಷ್ಯಾದಿಂದ ಇಂಧನ ಖರೀದಿಸಿದಂತೆ ಒತ್ತಾಯಿಸಿದ್ದು, ಇದನ್ನು ಮಾಸ್ಕೋ ಯುದ್ಧದ ಆರ್ಥಿಕ ಬಲ ಕುಗ್ಗಿಸುವ ಆಕ್ರಮಣಕಾರಿ ಮಾರ್ಗದ ತಂತ್ರ ಎಂದು ಅವರು ಕರೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅಮೆರಿಕ ಅಧ್ಯಕ್ಷ ಮತ್ತು ಅವರ ಆಡಳಿತ ಕೂಡ ಭಾರತ, ರಷ್ಯಾದಿಂದ ತೈಲ ಖರೀದಿ ಗಣನೀಯ ಪ್ರಮಾಣದಲ್ಲಿ ತಗ್ಗಿಸುವುದಾಗಿ ಭರವಸೆ ನೀಡಿದೆ ಎಂಬುದನ್ನು ​ಪುನರುಚ್ಛಾರ ಮಾಡಿತ್ತು.

ಆದಾಗ್ಯೂ ದೇಶದ ಹಿತಾಸಕ್ತಿ, ಗ್ರಾಹಕರಿಗೆ ಸುರಕ್ಷಿತ ಪೂರೈಕೆ ಮತ್ತು ವಿಶೇಷವಾಗಿ ಕೈಗೆಟುಕುವ ದರದಲ್ಲಿ ಇಂಧನ ಒದಗಿಸುವುರಿಂದ ನಮ್ಮ ಇಂಧನ ನೀತಿ ನಿರ್ದೇಶಿಸಲ್ಪಟ್ಟಿದೆ ಎಂದು ಭಾರತ ಪದೇ ಪದೇ ಸ್ಪಷ್ಟಪಡಿಸಿದೆ. ಅಮೆರಿಕದ ಪ್ರಕಾರ, ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್​ ನಡುವಿನ ಮಾಸ್ಕೋ ಯುದ್ಧಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂಬ ಅನುಮಾನ ಹೊಂದಿದೆ.

ಈ ಕಾರಣದಿಂದಾಗಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಆಮದು ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚವರಿ ದಂಡವಾಗಿ ಶೇ 50ರಷ್ಟು ಸುಂಕ ವಿಧಿಸುವ ಮೂಲಕ ನವದೆಹಲಿ ಮತ್ತು ವಾಷಿಂಗ್ಟನ್​ ನಡುವಿನ ಸಂಬಂಧದಲ್ಲಿ ಒತ್ತಡ ಹೆಚ್ಚಿಸಲಾಗಿತ್ತು. ಭಾರತ ಅಮೆರಿಕದ ಈ ಕ್ರಮವನ್ನು ನ್ಯಾಯಸಮ್ಮತವಲ್ಲ, ಸಕಾರಣವನ್ನು ಹೊಂದಿಲ್ಲ ಎಂದು ಟೀಕಿಸಿತ್ತು.

ಪುಟಿನ್​ ವಿರುದ್ಧ ಟ್ರಂಪ್​ ಹತಾಶೆ: ಟ್ರಂಪ್​ ರಷ್ಯಾದ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾಗಿ ತಿಳಿಸಿರುವ ಲೀವಿಟ್​​, ಶಾಂತಿ ಇತ್ಯರ್ಥದತ್ತ ಸಾಗುವಲ್ಲಿ ಸಾಕಷ್ಟು ಆಸಕ್ತಿ ಅಥವಾ ಕ್ರಮ ತೋರಿಸದಿದ್ದಕ್ಕಾಗಿ ಪುಟಿನ್ ವಿರುದ್ಧ ಟ್ರಂಪ್​ ಹತಾಶೆ ವ್ಯಕ್ತಪಡಿಸಿದ್ದಾರೆ. ಹಂಗೇರಿಯಲ್ಲಿ ಪುಟಿನ್​ ಮತ್ತು ಟ್ರಂಪ್​ ಭೇಟಿಯಾಗಬೇಕಿತ್ತು. ಆದರೆ, ಈ ಭೇಟಿ ಇದೀಗ ಅನಿರ್ದಿಷ್ಟ ಕಾರಣದಿಂದ ಮುಂದೂಡಲಾಗಿದೆ. ಈ ಕುರಿತು ಮಾತನಾಡಿರುವ ಅವರು, ಇಬ್ಬರು ನಾಯಕರ ನಡುವಿನ ಸಭೆ ಸಂಪೂರ್ಣಗೊಂಡಿಲ್ಲ. ಇದು ಮುಂದೊಂದು ದಿನ ನಡೆಯಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!