ಉದಯವಾಹಿನಿ, ಕಾಬೂಲ್: ಹಿಂಸಾತ್ಮಕ ಸೇನಾ ಘರ್ಷಣೆಗಳ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಕದನ ವಿರಾಮ ಮುಕ್ತಾಯವಾಗಿದ್ದು, ಎರಡೂ ದೇಶಗಳ ನಡುವೆ ಮತ್ತೆ ಸಂಘರ್ಷದ ಅಪಾಯವನ್ನು ಹೆಚ್ಚಿಸಿದೆ. ಅಕ್ಟೋಬರ್ 15ರಂದು ಪಾಕಿಸ್ತಾನ ಮತ್ತು ಅಫ್ಘಾನ್ ತಾಲಿಬಾನ್ ನಡುವೆ ತಾತ್ಕಾಲಿಕ 48 ಗಂಟೆಗಳ ಕದನ ವಿರಾಮಕ್ಕೆ ಸಹಿ ಹಾಕಲಾಗಿತ್ತು. ಇದೀಗ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ವಿಡಿಯೋ ಮೂಲಕ ಪಾಕಿಸ್ತಾನಕ್ಕೆ ಬೆದರಿಕೆಯನ್ನು ಹಾಕಿದೆ. ಈ ವೀಡಿಯೊಗಳಲ್ಲಿ ಟಿಟಿಪಿಯ ಉನ್ನತ ಕಮಾಂಡರ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಬೆದರಿಕೆ ಹಾಕುತ್ತಿರುವುದು ಕಂಡು ಬಂದಿದೆ.ಪಾಕಿಸ್ತಾನಿ ಸೇನೆಯು ಸೈನಿಕರನ್ನು ಕೊಲ್ಲಲು ಕಳುಹಿಸುವುದನ್ನು ತಪ್ಪಿಸಬೇಕು ಮತ್ತು ಬದಲಾಗಿ ಉನ್ನತ ಅಧಿಕಾರಿಗಳು ತಮ್ಮನ್ನು ಯುದ್ಧಭೂಮಿಗೆ ಕರೆದೊಯ್ಯಬೇಕು ಎಂದು ಹೇಳಿದ್ದಾರೆ. ಈ ವೀಡಿಯೊಗಳು ಅಕ್ಟೋಬರ್ 8 ರಂದು ಖೈಬರ್ ಪಖ್ತುನ್ಖ್ವಾದ ಕುರ್ರಂನಲ್ಲಿ ನಡೆದ ಹೊಂಚುದಾಳಿಯ ಯುದ್ಧಭೂಮಿ ದೃಶ್ಯಗಳನ್ನು ಒಳಗೊಂಡಿವೆ, ಇದರಲ್ಲಿ ಟಿಟಿಪಿ 22 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ ಮತ್ತು ವಶಪಡಿಸಿಕೊಂಡ ಮದ್ದುಗುಂಡುಗಳು ಮತ್ತು ವಾಹನಗಳನ್ನು ತೋರಿಸುತ್ತದೆ. ದಾಳಿಯಲ್ಲಿ 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆ ಒಪ್ಪಿಕೊಂಡಿದೆ.
