ಉದಯವಾಹಿನಿ, ಬೆಂಗಳೂರು : ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ದೊಡ್ಡವರೆಲ್ಲರೂ ಟ್ವೀಟ್ ಮಾಡಿ ಟೀಕೆ ಮಾಡುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ಪರಿಹಾರವೇನು ಎಂದು ಯಾರೊಬ್ಬರೂ ಹೇಳುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಬೆಳ್ಳಿ ಮಹೋತ್ಸವ-2025 ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು. ನೀವು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ನಾವು ಸರ್ಕಾರದಲ್ಲಿ ಕೆಲಸ ಮಾಡುವಾಗ ಬರೀ ಪಿಐಎಲ್, ಬ್ಲ್ಯಾಕ್‌ಮೇಲ್ ನಡೆಯುತ್ತಿರುತ್ತದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ರಸ್ತೆಗಳು ಮಾತ್ರ ಅದೇ ಗಾತ್ರದಲ್ಲಿವೆ. ನಾವು ಎಷ್ಟೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನೀಡಿದರೂ ಜನ ತಮ್ಮ ಕುಟುಂಬದ ಜತೆ ತಮ್ಮದೇ ವಾಹನಗಳಲ್ಲಿ ಓಡಾಡಲು ಇಚ್ಛಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಸಂಚಾರ ದಟ್ಟಣೆ ನಿವಾರಿಸುವುದಾದರೂ ಹೇಗೆ? ಮುಂಬೈ, ದೆಹಲಿಯಲ್ಲಿ ಇಷ್ಟೇ ಸಂಚಾರ ದಟ್ಟಣೆ ಇದ್ದರೂ ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ದೊಡ್ಡವರೆಲ್ಲಾ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಾ ಕೂತಿದ್ದಾರೆ. ಟೀಕೆ ಮಾಡುತ್ತಿರುವವರು ಯಾರೂ ಪರಿಹಾರ ಏನು ಎಂದು ಹೇಳುತ್ತಿಲ್ಲ ಎಂದು ಹೇಳಿದರು.
ಸಂಚಾರ ದಟ್ಟಣೆ ನಿವಾರಣೆಗೆ ನಾನು ಟನಲ್ ರಸ್ತೆ ಮಾಡಲು ಮುಂದಾಗಿದ್ದೇನೆ. 117 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೇವೆ. 2007ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು ಆಗ ಮಾಡಿದ್ದರೆ 2-3 ಸಾವಿರ ಕೋಟಿಯಲ್ಲಿ ಮುಕ್ತಾಯವಾಗುತ್ತಿತ್ತು. ಆದರೆ ಈಗ 27 ಸಾವಿರ ಕೋಟಿ ಬೇಕಾಗಿದೆ. ಇನ್ನು ಕೆ.ಜೆ. ಜಾರ್ಜ್ ಅವರ ಕಾಲದಲ್ಲಿ ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾದಾಗ ಗಲಾಟೆ ಮಾಡಿ ನಿಲ್ಲಿಸಿದರು. 120 ಕಿ.ಮೀ ಉದ್ದದಷ್ಟು ಎಲಿವೇಟೆಡ್ ಕಾರಿಡಾರ್, 44 ಕಿ.ಮೀ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆ ರೂಪಿಸಿದ್ದೆ. ಆ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ 1.40 ಲಕ್ಷ ಕೋಟಿ ಮೊತ್ತದ ಯೋಜನೆಗೆ ಮುಂದಾಗಿದ್ದೇವೆ. ಕೆಲವರು ಇದನ್ನು ಹಣ ಬಾಚಲು ಈ ಯೋಜನೆ ಮಾಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ ಎಂದರು.
