ಉದಯವಾಹಿನಿ, ಬೆಂಗಳೂರು : ಬೆಂಗಳೂರಿನಲ್ಲಿ ಒಂದು ʼಲವ್ ಜಿಹಾದ್‌ʼ ಎನ್ನಲಾದ ಪ್ರಕರಣ ನಡೆದಿದೆ. ಮದುವೆ ಆಮಿಷ ತೋರಿಸಿ ಯುವತಿಯನ್ನು ಬಲಾತ್ಕರಿಸಿ, ಮತಾಂತರಕ್ಕೆ ವಿಫಲ ಯತ್ನ ನಡೆಸಿ ನಂತರ ಕೈಕೊಟ್ಟ ಆರೋಪಿಯನ್ನು ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಅಮೃತಹಳ್ಳಿ ಠಾಣೆ ಪೋಲೀಸರು ಆರೋಪಿ ಮೊಹಮ್ಮದ್ ಇಶಾಕ್ ಎಂಬಾತನನ್ನು ಆರೆಸ್ಟ್ ಮಾಡಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದಕ್ಕೆ ಪ್ರೀತಿಸಿದ ಯುವತಿಗೆ ಮಹಮ್ಮದ್ ಇಶಾಕ್ ಕೈಕೊಟ್ಟಿದ್ದಾನೆ.
2024ರ ಅಕ್ಟೋಬರ್​​ 17ರಂದು ಯುವತಿಗೆ ಮೊಹಮ್ಮದ್ ಇಶಾಕ್‌ನ ಪರಿಚಯವಾಗಿತ್ತು. ಈ ಪರಿಚಯ ಸ್ನೇಹ ಮತ್ತು ಪ್ರೀತಿಯಾಗಿ ಬೆಳೆದಿತ್ತು. 2024ರ ಅಕ್ಟೋಬರ್​​ 30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರೂ ಭೇಟಿಯಾಗಿದ್ದರು. ನಂತರ ಯುವತಿ ಜೊತೆ ಇಶಾಕ್ ಸಲುಗೆ ಬೆಳೆಸಿಕೊಂಡಿದ್ದ. ಮದುವೆ ಸಂಬಂಧ ಮನೆಯವರೊಂದಿಗೆ ಮಾತನಾಡೋದಾಗಿ ಇಶಾಕ್ ನಂಬಿಸಿದ್ದ.
ಒಂದು ದಿನ ದಾಸರಹಳ್ಳಿ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದ ಇಶಾಕ್, ಯುವತಿಯನ್ನು ಕರೆಸಿಕೊಂಡಿದ್ದ. ಈ ವೇಳೆ ಮದುವೆಯ ಭರವಸೆ ನೀಡಿ ಆಕೆಯೊಂದಿಗೆ ದೈಹಿಕ ಸಂಪರ್ಕ ಮಾಡಿದ್ದಾನೆ. ನಂತರ ಹಲವು ಬಾರಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೆಲವು ದಿನಗಳ ನಂತರ ಬೇರೆ ಯುವತಿಯರ ಜೊತೆ ಇಶಾಕ್ ಸಂಪರ್ಕ ಹೊಂದಿರುವ ವಿಷಯ ಆಕೆಗೆ ಗೊತ್ತಾಗಿದೆ.

2025ರ ಸೆ.14ರಂದು ಮುಸ್ಲಿಂ ಯುವತಿಯೊಬ್ಬರ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ತಿಳಿದು ಪ್ರಶ್ನೆ ಮಾಡಿದಾಗ, ನಿನ್ನ ದಾರಿಯನ್ನು ನೀನು ನೋಡಿಕೋ ಎಂದು ಇಶಾಕ್ ಹೇಳಿದ್ದಾನೆ. ಇಷ್ಟು ಮಾತ್ರವಲ್ಲ ಪದೇ ಪದೆ ಕರೆ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಒಂದು ದಿನ ಇಶಾಕ್‌ನ ಸೋದರ ಮತ್ತು ಬಾವ ಬಂದು ನನ್ನೊಂದಿಗೆ ಮಾತನಾಡಿ ಇಸ್ಲಾಂಗೆ ಮತಾಂತರ ಆಗುವಂತೆ ಹೇಳಿದ್ದರು. ಮತಾಂತರವಾಗಲು 40 ದಿನ ಸಮಯ ಇರುತ್ತೆ. ನಮಾಜ್ ಮಾಡಲು ಕಲಿತುಕೊಳ್ಳಬೇಕು. ಮೊದಲು ಮತಾಂತರ ಆಗು, ಆನಂತರ ಮದುವೆ ಬಗ್ಗೆ ಮಾತನಾಡೋಣ ಎಂದಿದ್ದರು ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!