ಉದಯವಾಹಿನಿ, ಹೊಸದಿಲ್ಲಿ: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ತಲುಪುವ ನೆಚ್ಚಿನ ತಂಡಗಳಾಗಿವೆ ಎಂದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಒಂದು ತಂಡ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಕ್ಟೋಬರ್ 5 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್‌ ಅಪ್ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದರೆ, ಅಕ್ಟೋಬರ್ 8 ರಂದು ಭಾರತ ತಂಡ, ಬಲಿಷ್ಠ ಆಸ್ಟ್ರೇಲಿಯಾದ ಸವಾಲನ್ನು ಎದುರಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 15 ರಂದು ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸಾಂಪ್ರದಾಯ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಲಿವೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನನ್ನ ತವರು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಣಸಬೇಕೆಂದು ಸೌರವ್‌ ಗಂಗೂಲಿ ನಿರೀಕ್ಷಿಸುತ್ತಿದ್ದಾರೆ.

48 ವರ್ಷಗಳ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತ ವಿಶ್ವಕಪ್ ಟೂರ್ನಿಗೆ ಪರಿಪೂರ್ಣ ಆತಿಥ್ಯ ವಹಿಸಿದ್ದು, ಈ ಕುರಿತು ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. “ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ತಲುಪಲಿವೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಎಂದಿಗೂ ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾನು ಪಾಕಿಸ್ತಾನ ಸೇರಿದಂತೆ 5 ತಂಡಗಳನ್ನು ಸೆಮಿಫೈನಲ್‌ಗೆ ಆರಿಸುತ್ತೇನೆ. ಪಾಕಿಸ್ತಾನ ಅರ್ಹತೆ ಪಡೆಯಲಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ನೋಡಲು ಬಯಸುತ್ತೇನೆ,” ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ. ಭಾರತ ತಂಡದ ಆಟಗಾರರ ಮೇಲೆ ಯಾವುದೇ ಮಾನಸಿಕ ಒತ್ತಡವಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದು, ಆಟಗಾರರು ಆ ವಿಷಯದಲ್ಲಿ ತುಂಬಾ ಬಲಿಷ್ಠವಾಗಿದ್ದಾರೆ. ಆದರೆ, ಹೆಚ್ಚಿನ ಒತ್ತಡದ ಪಂದ್ಯಗಳಲ್ಲಿ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ಎಡವುತ್ತಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯು ತವರಿನ ಅಂಗಣದಲ್ಲಿ ನಡೆಯಲಿದ್ದು, ಹಾಗಾಗಿ ಆಟಗಾರರು ಒತ್ತಡಕ್ಕೆ ಒಳಗಾದರೂ ಅದನ್ನು ನಿರ್ವಹಿಸುತ್ತಾರೆಂದು ದಾದಾ ಹೇಳಿದ್ದಾರೆ. “ಒತ್ತಡ ಯಾವಾಗಲೂ ಇದ್ದೇ ಇರುತ್ತದೆ. ಈ ಹಿಂದಿನ ಪಂದ್ಯಗಳಲ್ಲೂ ಒತ್ತಡವಿತ್ತು. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ 5 ಶತಕ ಸಿಡಿಸಿದ್ದರು. ಆಗಲೂ ಅವರ ಮೇಲೆ ಒತ್ತಡ ಇತ್ತು ಎಂದು ಭಾವಿಸುತ್ತೇನೆ. ಒತ್ತಡ ಎಂಬುದು ಸಮಸ್ಯೆಯಲ್ಲ, ಅದರಿಂದ ಹೊರಬರಲು ದಾರಿ ಹುಡುಕಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ,” ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!