
ಉದಯವಾಹಿನಿ , ಪ್ಯಾರಿಸ್: ಫ್ರಾನ್ಸ್‌ನ ಪ್ಯಾರಿಸ್‍ನಲ್ಲಿರುವ ಐತಿಹಾಸಿಕ ಲೌವ್ರೆ ವಸ್ತುಸಂಗ್ರಹಾಲಯದಿಂದ ಅಮೂಲ್ಯ ಆಭರಣಗಳನ್ನು ಕಳವು ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಅಕ್ಟೋಬರ್ 19ರಂದು ನಡೆದ ಈ ದರೋಡೆಯಲ್ಲಿ ಕಳ್ಳರು ಅಂದಾಜು $ 102 ಮಿಲಿಯನ್ ಮೌಲ್ಯದ ಎಂಟು ಅಮೂಲ್ಯ ಆಭರಣಗಳನ್ನು ದೋಚಿದ್ದರು. ಕಳ್ಳರು ಕ್ರೇನ್ ಬಳಸಿ ಮಹಡಿಯ ಕಿಟಕಿಯನ್ನು ಒಡೆದು, ನಂತರ ಬೈಕ್‍ನಲ್ಲಿ ಪರಾರಿಯಾಗಿದ್ದರು ಎನ್ನಲಾಗಿದೆ. ಈ ಘಟನೆಯು ಫ್ರಾನ್ಸ್‌ನಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿತು. ಅನೇಕರು ಇದನ್ನು ದೇಶಕ್ಕೆ ಮುಜುಗರದ ಸಂಗತಿ ಎಂದು ಹೇಳಿದರು.
8 ನಿಮಿಷಗಳಲ್ಲಿ ನಡೆದ ದರೋಡೆ: ಬೆಳಗ್ಗೆ 9.30 ರ ಸುಮಾರಿಗೆ, ನವೀಕರಣ ಕಾರ್ಮಿಕರಂತೆ ಕಳ್ಳರು ವೇಷ ಧರಿಸಿ ಬಂದಿದ್ದರು. ಪ್ಯಾರಿಸ್‌ನಲ್ಲಿ ಸಾಮಾನ್ಯ ದೃಶ್ಯವಾದ ಸರಕು ಸಾಗಣೆ ಲಿಫ್ಟ್ ಹೊಂದಿರುವ ಟ್ರಕ್ ಅನ್ನು ಸೀನ್ ನದಿಯ ಪಕ್ಕದಲ್ಲಿರುವ ಕ್ವಾಯ್ ಫ್ರಾಂಕೋಯಿಸ್ ಮಿತ್ತರಾಂಡ್‌ನಲ್ಲಿರುವ ಲೌವ್ರೆಯ ಬುಡದಲ್ಲಿರುವ ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿದ್ದಾರೆ. ನಿರ್ವಹಣಾ ಕಾರ್ಯಾಚರಣೆಯನ್ನು ಅನುಕರಿಸಲು ಅವರು ಟ್ರಕ್ ಸುತ್ತಲೂ ಟ್ರಾಫಿಕ್ ಕೋನ್‌ಗಳನ್ನು ಹಾಕಿದರು. ನಂತರ ಇಬ್ಬರೂ ಬಾಲ್ಕನಿಯನ್ನು ತಲುಪಲು ಏಣಿಯನ್ನು ಹತ್ತಿ ಕಿಟಕಿಯ ಮೂಲಕ ಪ್ರವೇಶ ಪಡೆದರು.
ಬೆಳಗ್ಗೆ 9.34 ರ ಸುಮಾರಿಗೆ ಅಪೋಲೋ ಗ್ಯಾಲರಿಯ ದಕ್ಷಿಣ ತುದಿಯನ್ನು ಕಳ್ಳರು ಪ್ರವೇಶಿಸಿದರು. ಈ ವೇಳೆ ಭದ್ರತಾ ನಿಯಂತ್ರಣ ಕೊಠಡಿಯಲ್ಲಿ ಅಲಾರಾಂ ಸದ್ದು ಕೇಳಿಬಂತು. ಕೊಠಡಿಯಲ್ಲಿದ್ದ ಸಿಬ್ಬಂದಿಯೊಬ್ಬರು ಕಳ್ಳರ ಬಗ್ಗೆ ಎಚ್ಚರಿಕೆ ನೀಡಲು ಕಮಾಂಡ್ ಸೆಂಟರ್ ಸದಸ್ಯರಿಗೆ ರೇಡಿಯೋ ಕರೆ ಮಾಡಿದರು.
ಒಂದು ನಿಮಿಷದೊಳಗೆ, ದರೋಡೆಕೋರರು ಡಿಸ್ಕ್ ಕಟ್ಟರ್‌ಗಳನ್ನು ಬಳಸಿ ಗಾಜನ್ನು ಕತ್ತರಿಸಿ ಆಭರಣಗಳನ್ನು ಹೊತ್ತೊಯ್ದರು. ಕಳ್ಳರು ನುಗ್ಗಿರುವ ವಿಚಾರ ತಿಳಿಯುತ್ತಿದ್ದಂತೆ, ಪ್ರವಾಸಿಗರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರತಾ ಅಧಿಕಾರಿಗಳು ಅವರನ್ನು ಬೇರೆಡೆಗೆ ಸ್ಥಳಾಂತರಿಸಿದರು. ವಸ್ತುಸಂಗ್ರಹಾಲಯ ವ್ಯವಸ್ಥಾಪಕರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಕರೆ ಮಾಡಿ ಕಳ್ಳತನ ನಡೆಯುತ್ತಿರುವ ಬಗ್ಗೆ ತಿಳಿಸಿದ್ದು, ತಕ್ಷಣವೇ ಸಹಾಯವನ್ನು ಕೇಳಿದರು.
