ಉದಯವಾಹಿನಿ, ಅಲ್ಬೇನಿಯಾ: ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ್ದ ಅಲ್ಬೇನಿಯಾದ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಸಚಿವೆ ಡಿಯೆಲ್ಲಾ ಈಗ ಗರ್ಭಿಣಿಯಾಗಿದ್ದು, 83 ಮಕ್ಕಳ ತಾಯಿಯಾಗಲಿದ್ದಾರೆ ಎಂದು ಪ್ರಧಾನಿ ಎಡಿ ರಾಮ ವಿಚತ್ರ ಘೋಷಣೆ ಮಾಡಿದ್ದಾರೆ. ಜರ್ಮನಿಯ ಬೆರ್ಲಿನ್‌ನಲ್ಲಿ ನಡೆದ ಗ್ಲೋಬಲ್ ಡಯಲಾಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ನಾವು ಡಿಯೆಲ್ಲಾ ವಿಚಾರದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದು, ಅದು ಯಶಸ್ವಿ ಕೂಡ ಆಗಿದೆ. ಡಿಯೆಲ್ಲಾ ಮೊದಲ ಬಾರಿ ಗರ್ಭಿಣಿಯಾಗಿದ್ದು, ಅವರು 83 ಮಕ್ಕಳಿಗೆ ತಾಯಿಯಾಗಲಿದ್ದಾರೆ. ಈ “ಮಕ್ಕಳು ಅಥವಾ ಸಹಾಯಕರು” ಸಂಸತ್ತಿನ ಎಲ್ಲಾ ಚರ್ಚೆಗಳನ್ನು ದಾಖಲಿಸಲಿದ್ದಾರೆ ಮತ್ತು ಸದಸ್ಯರು ಹಾಜರಾಗದ ಸಂದರ್ಭಗಳಲ್ಲಿ ಅವರಿಗೆ ಮಾಹಿತಿ ನೀಡಲಿದ್ದಾರೆ,” ಎಂದರು.
ಅಲ್ಲದೇ, “ಪ್ರತಿಯೊಬ್ಬರೂ.. ಸಂಸತ್ತಿನಲ್ಲಿ ಭಾಗವಹಿಸುವ ಸಂಸದರಿಗೆ ಸಹಾಯಕನಂತೆ ಕೆಲಸ ಮಾಡಲಿದ್ದಾರೆ. ಸಂಸತ್ ಅಧಿವೇಶನಗಳಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ದಾಖಲಿಸಿ, ಸಲಹೆ ನೀಡಲಿದ್ದಾರೆ. ಈ ಮಕ್ಕಳು ತಮ್ಮ ತಾಯಿಯ ಜ್ಞಾನವನ್ನೇ ಹೊಂದಿರುತ್ತಾರೆ. 2026ರ ಅಂತ್ಯದ ವೇಳೆಗೆ ಈ ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ,” ಎಂದು ಎಡಿ ರಾಮ ತಿಳಿಸಿದ್ದಾರೆ.
ಸಾರ್ವಜನಿಕ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕತೆ ಮತ್ತು ಭ್ರಷ್ಟಾಚಾರಮುಕ್ತಗೊಳಿಸುವ ಉದ್ದೇಶದಿಂದ ಅಲ್ಬೇನಿಯಾ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಅಧಿಕೃತವಾಗಿ ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುವ ಮೊದಲ ಸಚಿವೆ ಡಿಯೆಲ್ಲಾ ಅವರನ್ನು ನೇಮಿಸಿತ್ತು. ಡಿಯೆಲ್ಲಾ ಅವರನ್ನು ಮೊದಲ ಬಾರಿಗೆ ಈ ವರ್ಷದ ಜನವರಿಯಲ್ಲಿ e-Albania ಪೋರ್ಟಲ್‌ನಲ್ಲಿ ವರ್ಚುವಲ್ ಸಹಾಯಕಿಯಾಗಿ ಪರಿಚಯಿಸಲಾಯಿತು. ಅವರು ನಾಗರಿಕರು ಮತ್ತು ವ್ಯವಹಾರ ಸಂಸ್ಥೆಗಳಿಗೆ ಸರ್ಕಾರಿ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ. ಈ AI ಸಚಿವೆ ಡಯೆಲ್ಲಾರನ್ನು ಸಾಂಪ್ರದಾಯಿಕ ಅಲ್ಬೇನಿಯನ್ ಉಡುಪಿನಲ್ಲಿ ಮಹಿಳೆಯ ರೂಪದಲ್ಲಿ ತೋರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!