ಉದಯವಾಹಿನಿ, ವಾಷಿಂಗ್ಟನ್‌: ಪಾಕಿಸ್ತಾನದ ಜೊತೆಗಿನ ಸಂಬಂಧ ಬಲಪಡಿಸಲು ಅಮೆರಿಕ ಪ್ರಯತ್ನಿಸುತ್ತಿದೆ. ಆದ್ರೆ ಇದು ಭಾರತದೊಂದಿಗಿನ ಸ್ನೇಹಕ್ಕೆ, ಐತಿಹಾಸಿಕ ಸಂಬಂಧಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಭೇಟಿಯ ನಂತರ ಈ ಬೆಳವಣಿಗೆ ನಡೆದಿದೆ. ಉಭಯ ದೇಶಗಳ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಹೇಳಿಕೊಂಡಿದ್ದನ್ನು ಭಾರತ ತಿರಸ್ಕರಿಸಿದ್ದರೆ, ಪಾಕಿಸ್ತಾನವು ಸಂಘರ್ಷ ಕೊನೆಗೊಳಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷರಿಗೆ ಮಣೆ ಹಾಕಿದೆ.
ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಲೇಷ್ಯಾದ ಕ್ವಾಲಾಲಂಪುರಕ್ಕೆ ತೆರಳುವ ಮುನ್ನ ಮಾತನಾಡಿದ ರುಬಿಯೋ, ಪಾಕಿಸ್ತಾನ ಜೊತೆಗಿನ ಸಂಬಂಧ ಬಲಪಡಿಸುವಿಕೆಯೂ ಭಾರತದ ಜೊತೆಗಿನ ಐತಿಹಾಸಿಕ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ. ಆದ್ರೆ ಅಮೆರಿಕಕ್ಕೆ ಎಲ್ಲ ದೇಶದೊಂದಿಗೆ ದ್ವಿಪಕ್ಷೀಯ ಸಂಬಂಧ ಹೊಂದುವುದು ಅನಿವಾರ್ಯ. ಭಾರತ ಇದನ್ನ ಅರ್ಥ ಮಾಡಿಕೊಳ್ಳಬೇಕು ಅಂತ ಹೇಳಿದ್ದಾರೆ. ರಕ್ಷಣಾ ಸಂಬಂಧ ವೃದ್ಧಿಗಾಗಿ ನಾವು ಪಾಕಿಸ್ತಾನದ ಜೊತೆ ಸಂಬಂಧ ಬೆಳೆಸುತ್ತಿದ್ದೇವೆ. ಭಾರತೀಯರು ರಾಜತಾಂತ್ರಿಕತೆ ಮತ್ತು ಅಂತಹ ವಿಷಯಗಳಲ್ಲಿ ಬಹಳ ಪ್ರಬುದ್ಧರಾಗಿದ್ದಾರೆ. ನಾವು ಸಂಬಂಧ ಹೊಂದಿರದಂತಹ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ಬಾಂಧವ್ಯ ಈಗಾಗಲೇ ಹೊಂದಿದೆ. ಹೀಗಾಗಿ ಇವೆಲ್ಲ ಪ್ರಬುದ್ಧತೆಯಿಂದ ಕೂಡಿದ ವಿದೇಶಾಂಗ ನೀತಿಯ ಭಾಗ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!