ಉದಯವಾಹಿನಿ, ಢಾಕಾ: ಭಯೋತ್ಪಾದನೆಗೆ ಪ್ರಚೋದನೆ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು 2016ರಿಂದ ಭಾರತ ತೊರೆದು ಮಲೇಷ್ಯಾದಲ್ಲಿ ವಾಸವಾಗಿರುವ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ಗೆ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ರೆಡ್‌ ಕಾರ್ಪೆಟ್‌ ಸ್ವಾಗತ ನೀಡಲು ಸಜ್ಜಾಗಿದೆ. ಯೂನಸ್ ನೇತೃತ್ವದ ಆಡಳಿತವು ನಾಯ್ಕ್‌ಗಾಗಿ ಒಂದು ತಿಂಗಳ ಕಾಲ ರಾಷ್ಟ್ರವ್ಯಾಪಿ ಪ್ರವಾಸಕ್ಕೆ ಅನುಮೋದನೆ ನೀಡಿದೆ.
ಕಾರ್ಯಕ್ರಮ ಆಯೋಜಕರ ಪ್ರಕಾರ, ನವೆಂಬರ್ 28 ರಿಂದ ಡಿಸೆಂಬರ್ 20, 2025 ರವರೆಗೆ ನಿಗದಿಯಾಗಿರುವ ಈ ಪ್ರವಾಸವನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದೆ ಮತ್ತು ಅಧಿಕಾರಿಗಳು ಇದಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ನಾಯ್ಕ್‌ ತನ್ನ ವಾಸ್ತವ್ಯದ ಸಮಯದಲ್ಲಿ ದೇಶಾದ್ಯಂತ ಸರಣಿ ಧರ್ಮೋಪದೇಶ ನೀಡಲಿದ್ದಾನೆ. ಜುಲೈ 2016 ರ ಢಾಕಾ ಹೋಲೆ ಆರ್ಟಿಸನ್ ಬೇಕರಿ ಭಯೋತ್ಪಾದಕ ದಾಳಿಯ ನಂತರ ಝಾಕಿರ್ ನಾಯ್ಕ್‌ ಒಡೆತನದ ಪೀಸ್‌ ಟಿವಿಯನ್ನು ಈ ಹಿಂದಿನ ಶೇಖ್‌ ಹಸೀನಾ ನೇತೃತ್ವದ ಸರ್ಕಾರ ನಿಷೇಧಗೊಳಿಸಿತ್ತು. ಇದೀಗ ಯೂನಸ್‌ ಸರ್ಕಾರ ಝಾಕಿರ್ ನಾಯ್ಕ್‌ಗೆ ಮಾನ್ಯತೆ ನೀಡಿದೆ.
ಭಾರತದಲ್ಲಿ ದ್ವೇಷ ಭಾಷಣ ಮತ್ತು ಕೋಮು ಸೌಹಾರ್ದತೆಯನ್ನು ಕೆರಳಿಸುವ ಆರೋಪಗಳನ್ನು ಈತ ಎದುರಿಸುತ್ತಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಈಗ ಭಾರತೀಯ ನ್ಯಾಯ ಸಂಹಿತಾ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಝಾಕಿರ್ ನಾಯ್ಕ್ ಹಸ್ತಾಂತರಕ್ಕೆ ಭಾರತ 2018ರಿಂದ ಮಲೇಷ್ಯಾ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!