ಉದಯವಾಹಿನಿ, ಮೈಸೂರು: ದನ ಮೇಯಿಸಲು ಹೋಗಿದ್ದ ವೇಳೆ ರೈತನನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಸಾಕಾನೆಗಳ ಸಹಾಯದಿಂದ ಹುಲಿಯನ್ನು ಸೆರೆಹಿಡಿಯಲಾಗಿದೆ. ಸರಗೂರು ತಾಲೂಕಿನ ಮುಳ್ಳೂರು ಬಳಿ ಹುಲಿ ಸೆರೆಯಾಗಿದೆ. ಯಡಿಯಾಲ ಅರಣ್ಯ ವಲಯದ ಮುಳ್ಳೂರು ಬಳಿ ಅರವಳಿಕೆ ನೀಡಿ ಹುಲಿಯನ್ನು ಸೆರೆಹಿಡಿಯಲಾಯಿತು. ಸೆರೆಹಿಡಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ. ಸದ್ಯ ಹುಲಿ ಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆ ಏನು..?: ದನ ಮೇಯಿಸಲು ಹೋಗಿದ್ದ ವೇಳೆ ರೈತ ಹುಲಿ ದಾಳಿಗೆ ಬಲಿಯಾದ ಘಟನೆ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ನಡೆದಿತ್ತು. ರಾಜಶೇಖರ (58) ಮೃತ ರೈತ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಮೃತ ರೈತನ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ವೇಳೆ ಸಚಿವ ಈಶ್ವರ್ ಖಂಡ್ರೆ ಆಗಮಿಸಿದ್ದರು. ಈ ವೇಳೆ ರೈತರು ಸಚಿವರಿಗೆ ಘೇರಾವ್ ಹಾಕಿ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಸೂಕ್ತ ಪರಿಹಾರ ಘೋಷಣೆ ಮಾಡಬೇಕು. ಪ್ರಾಣಿ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡಬೇಕು. ಘಟನೆಗೆ ಕಾರಣೀಕರ್ತರಾದವರಿಗೆ ತಕ್ಷಣ ವಜಾ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದರು.
