ಉದಯವಾಹಿನಿ, ಬೆಂಗಳೂರು: ಅನ್ಯ ಕೋಮಿನ ಯುವಕನೊಬ್ಬ ಚಪ್ಪಲಿ ಸಮೇತ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹಗಳನ್ನು ಎಳೆದಾಡಿ, ಚಪ್ಪಲಿಯಿಂದ ಒದ್ದು ವಿಕೃತಿ ಮೆರೆದ ಘಟನೆ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ಅಕ್ಟೋಬರ್ 28ರಂದು ಬೆಳಗ್ಗೆ 8:30ರ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಆಕ್ರೋಶ ಹೊರಗೆ ಹಾಕಿದ್ದಾರೆ. ದೇವರ ಬೀಸನಹಳ್ಳಿಯಲ್ಲಿ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ಕಬೀರ್ ಈ ಕೃತ್ಯ ಎಸಗಿದ್ದಾನೆ.ಈತ ವಿಶೇಷ ಚೇತನ ಎನ್ನಲಾಗುತ್ತಿದ್ದು ಘಟನೆಗೂ ಮುನ್ನ ಕಬೀರ್ ತನ್ನ ಧರ್ಮದ ಪರ ಘೋಷಣೆಗಳನ್ನು ಕೂಗುತ್ತಾ ಬಂದಿದ್ದ. ಮೆಡಿಕಲ್ ಅಂಗಡಿ ಮುಂದೆ ಇಟ್ಟಿದ್ದ ಗಣಪತಿ ದೇವರ ಫೋಟೋಗೆ ಸ್ಟಿಕ್‌ನಿಂದ ಹೊಡೆದಿದ್ದ. ಈ ವರ್ತನೆಯನ್ನು ಸ್ಥಳೀಯರು ವಿರೋಧಿಸಿದಾಗ ಕಬೀರ್ ನೇರವಾಗಿ ಹತ್ತಿರದಲ್ಲೇ ಇದ್ದ ವೇಣುಗೋಪಾಲಸ್ವಾಮಿ ದೇವಸ್ಥಾನದತ್ತ ಓಡಿದ್ದಾನೆ.
ದೇವಸ್ಥಾನದ ಬಳಿ ಕೂಗಾಡಿ, ಕೈಯಲ್ಲಿದ್ದ ಕಲ್ಲಿನಿಂದ ಗರುಡಗಂಬಕ್ಕೆ ಹೊಡೆದಿದ್ದಾನೆ. ಬಳಿಕ ಕೈಯಲ್ಲಿ ಆಯಿಲ್ ಮಾದರಿಯ ವಸ್ತುವನ್ನು ಹಿಡಿದುಕೊಂಡು ಚಪ್ಪಲಿ ಕಾಲಲ್ಲಿಯೇ ಗರ್ಭಗುಡಿಗೆ ನುಗ್ಗಿ ದೇವರ ಮೂರ್ತಿಯನ್ನು ಎಳೆದಾಡಿ ಚಪ್ಪಲಿಯಿಂದ ಒದ್ದಿದ್ದಾನೆ.
ಕಬೀರ್‌ನ ಈ ವಿಕೃತಿಯನ್ನು ಕಂಡು ದೇವಸ್ಥಾನದ ಸಿಬ್ಬಂದಿ ಮತ್ತು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಆತನನ್ನು ಹಿಡಿದು ಹೊರಗೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ನಂತರ ಮರತ್ತಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!