ಉದಯವಾಹಿನಿ, ಹುಬ್ಬಳ್ಳಿ, : ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ (Sudha Murty) ತಾವು ಕಲಿತ ಶಾಲೆಯ ಪುನರುಜ್ಜೀವನಕ್ಕೆ ಕ್ರಮ ಕೈಗೊಂಡಿದ್ದು, ಕೋಟ್ಯಂತರ ರೂಪಾಯಿ ವ್ಯಯಿಸಿ ಶಾಲೆಯ ನವೀಕರಣ ಮಾಡಿಸಿದ್ದಾರೆ. ತಾವು ಕಲಿತ ಹುಬ್ಬಳ್ಳಿಯ ಜ್ಞಾನ ಭಾರತಿ ಶಾಲೆಯಲ್ಲಿ ಈಗ ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ. ಸಾವಿರಾರು ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುವ ಮೂಲಕ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ನ್ಯೂ ಎಜ್ಯುಕೇಶನ್ ಸೊಸೈಟಿಯ ಜ್ಞಾನ ಭಾರತಿ ಶಾಲೆಯನ್ನು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ. 115 ವರ್ಷ ಇತಿಹಾಸ ಹೊಂದಿರುವ ಜ್ಞಾನ ಭಾರತಿ ಶಾಲೆಯಲ್ಲಿ ಸುಧಾ ಮೂರ್ತಿ 5 ನೇ ತರಗತಿಯಿಂದ 11 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಜೊತೆಗೆ ಅವರ ಸಹೋದರಿ ಸುನಂದಾ ಕುಲಕರ್ಣಿ ಕೂಡಾ ಇದೇ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಸುಧಾ ಮೂರ್ತಿ ತಾಯಿ ಕೂಡಾ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರಂತೆ!ಒಂದು ಸಮಯದಲ್ಲಿ ಇಡೀ ಹುಬ್ಬಳ್ಳಿಯಲ್ಲಿ ಸುಪ್ರಸಿದ್ದವಾಗಿದ್ದ ಜ್ಞಾನ ಭಾರತಿ ಕನ್ನಡ ಮಾಧ್ಯಮ ಶಾಲೆ ನಂತರದ ದಿನದಲ್ಲಿ ತನ್ನ ವೈಭವವನ್ನು ಕಳೆದುಕೊಂಡಿತ್ತು. ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಹಿಂದೆ ಬಿದ್ದಿತ್ತು. ಜೊತೆಗೆ ಶಾಲೆಯ ಕಟ್ಟಡ ಬೀಳುವ ಹಂತ ತಲುಪಿತ್ತು. ಕೆಲ ವರ್ಷಗಳ ಹಿಂದೆ ಸುಧಾ ಮೂರ್ತಿಯವರು, ತಾವು ಕಲಿತ ಶಾಲೆ ಹೇಗಿದೆ ಎಂದು ನೋಡಲು ಆಗಮಿಸಿದ್ದರು. ಬೀಳುವ ಹಂತಕ್ಕೆ ಬಂದ ಕಟ್ಟಡವನ್ನು ಗಮನಿಸಿದ್ದಾರೆ. ಮೂಲಸೌರ್ಕಯಗಳೂ ಇಲ್ಲದಿರುವುದನ್ನು ಗಮನಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಗಣನೀಯವಾಗಿ ಕಡಿಮೆಯಾಗಿತ್ತು. ಇದನ್ನು ನೋಡಿದ ಸುಧಾ ಮೂರ್ತಿ ಅವರು ಶಾಲೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ನವೀಕರಣ ಮಾಡಿಸಿದ್ದಾರೆ.
ಆರಂಭದಲ್ಲಿ ಕನ್ನಡ ಮಾಧ್ಯಮಲ್ಲಿದ್ದ ಶಾಲೆ ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತನೆ ಹೊಂದಿತ್ತು. ಇದೀಗ ಸ್ಟೇಟ್ ಬೋರ್ಡ್ನಿಂದ ಸಿಬಿಎಸ್ಇ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಸೋಮವಾರ (ಅಕ್ಟೋಬರ್ 28) ಆಗಮಿಸಿದ್ದ ಸುಧಾ ಮೂರ್ತಿ, ನವೀಕರಣ ಕಟ್ಟಡ ಉದ್ಘಾಟನೆ, ಸಿಬಿಎಸ್ಇ ಮಾನ್ಯತೆ ಬಗ್ಗೆ ಮಾಹಿತಿ ನೀಡಿದ್ದಾರೆ.
