ಉದಯವಾಹಿನಿ, ಬೆಂಗಳೂರು: ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ಯಾರು ಈ ಬಗ್ಗೆ ಮಾತಾಡದೇ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು ಎಂದು ಸ್ವಪಕ್ಷದವರ ವಿರುದ್ಧವೇ ಸಚಿವ ಬೋಸರಾಜು (ಆಕ್ರೋಶ ಹೊರಹಾಕಿದ್ದಾರೆ.
ನಾಯಕತ್ವ ಬದಲಾಣೆ ಮತ್ತು ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಏನೇ ಹೇಳಿದ್ರು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು 25 ವರ್ಷ ಕಾಂಗ್ರೆಸ್‌ನಲ್ಲಿ (Congress) ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದೇನೆ. ಯಾವತ್ತು ನಾನು ಅಧಿಕಾರ ಕೇಳಿಲ್ಲ. ಅಧಿಕಾರ ಬೇಕು ಅಂತ ಬಯೋಡಾಟಾ ರೆಡಿ ಮಾಡಿಲ್ಲ. ಮಂತ್ರಿ ಆಗಬೇಕು ಅಂತ ನಾನು ಶಾಸಕ, ಎಂಎಲ್‌ಸಿ ಆಗಲಿಲ್ಲ. ಫೋನ್ ಮಾಡಿದ್ರು ಬಂದು ಮಂತ್ರಿಯಾದೆ. ಒಂದು ಪಕ್ಷ ಶಿಸ್ತಿನ ರೀತಿ ಇರಬೇಕು. 100 ವರ್ಷದ ಇತಿಹಾಸದ ಪಕ್ಷ. ನಾವು ಮಾತಾಡಿದ ಕೂಡಲೇ ಮಾಧ್ಯಮಗಳು ಕೇಳುತ್ತಾರೆ. ಪರಮೇಶ್ವರ್, ಮುನಿಯಪ್ಪ ಯಾರಿಗೆ ಪ್ರಶ್ನೆ ಕೇಳಿದ್ರು ಒಂದೊಂದು ಹೇಳಿಕೆ ಮಾಧ್ಯಮಗಳಿಗೆ ಹೇಳಿದ್ದಾರೆ. ಸಿಎಂ ಅವರು ಹೈಕಮಾಂಡ್ ಹೇಳಿದಂತೆ ಕೇಳ್ತೀನಿ ಅಂತ ಹೇಳಿದ್ದಾರೆ. ಡಿಸಿಎಂ ಅವರು ಸಿಎಂ ಹೇಳಿದ ಮೇಲೆ ಮುಗೀತು ಅಂದಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಎಲ್ಲರೂ ಬಾಯಿಮುಚ್ಚಿಕೊಂಡು ಇರಬೇಕು ಎಂದು ಸ್ವಪಕ್ಷದವರಿಗೆ ಕಿವಿಮಾತು ಹೇಳಿದರು.
