ಉದಯವಾಹಿನಿ, ಕರಾಚಿ: ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರು ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಹೊಸ ಕೇಂದ್ರೀಯ ಗುತ್ತಿಗೆ ಒಪ್ಪಂದಕ್ಕೆ ಸಹಿ ಮಾಡಲು ನಿರಾಕರಿಸಿದ್ದಾರೆ. ಅವರಿಗೆ ‘ಬಿ’ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಿಜ್ವಾನ್ ಒಪ್ಪಂದಕ್ಕೆ ಸಹಿ ಮಾಡದಿರಲು ನಿರ್ಧರಿಸಿದ್ದಾರೆ. 30 ಆಟಗಾರರ ಹೊಸ ಗುತ್ತಿಗೆ ಪಟ್ಟಿಯನ್ನು ಪಿಸಿಬಿ ಬಿಡುಗಡೆ ಮಾಡಿದ್ದು, ಇದರಲ್ಲಿ ರಿಜ್ವಾನ್ ಹೊರತುಪಡಿಸಿ ಉಳಿದವರೆಲ್ಲರೂ ಸಹಿ ಮಾಡಿದ್ದಾರೆ.
ಕಳೆದ ಬಾರಿಯ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಬಾಬರ್ ಅಜಂ, ರಿಜ್ವಾನ್ , ಶಾಹಿನ್ ಅಫ್ರಿದಿ ಅವರಿಗೆ ‘ಎ’ ಗ್ರೇಡ್ ನೀಡಲಾಗಿತ್ತು. ಆದರೆ ಬಹುತೇಕ ಎಲ್ಲ ಸರಣಿಯಲ್ಲಿಯೂ ಇವರ ಸತತ ಕಳಪೆ ಪ್ರದರ್ಶನ ಕಂಡು ಈ ಬಾರಿ ಮೂವರು ಆಟಗಾರರಿಗೆ ‘ಬಿ’ ಗ್ರೇಡ್ ನೀಡಲಾಗಿದೆ. ʼಬಿʼ ಗ್ರೇಡ್‌ನಲ್ಲಿ ಒಟ್ಟು 10 ಆಟಗಾರರಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪಾಕ್ ಏಕದಿನ ತಂಡದ ನಾಯಕತ್ವದಿಂದ ಮೊಹಮ್ಮದ್ ರಿಜ್ವಾನ್‌ಗೆ ಕೊಕ್ ನೀಡಿ, ಅನುಭವಿ ಕ್ರಿಕೆಟಿಗ ಶಾಹೀನ್ ಅಫ್ರಿದಿಗೆ ತಂಡದ ಸಾರಥ್ಯ ನೀಡಲಾಗಿತ್ತು. ರಿಜ್ವಾನ್‌ರ ಅತಿಯಾದ ಧಾರ್ಮಿಕತೆಯೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ರಿಜ್ವಾನ್ ಡ್ರೆಸ್ಸಿಂಗ್ ಕೋಣೆಯಲ್ಲಿ ಅತಿಯಾಗಿ ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಇದು ಇತರ ಆಟಗಾರರಿಗೆ ಇಷ್ಟವಿರಲಿಲ್ಲ. ಅಲ್ಲದೇ ದಿನಕ್ಕೆ 5 ಬಾರಿ ನಮಾಜ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಜೊತೆಗೆ, ತಂಡದ ಕಳಪೆ ಪ್ರದರ್ಶನ ಮರೆಮಾಚಲು ಧಾರ್ಮಿಕ ವಿಚಾರಕ್ಕೆ ಒತ್ತು ಕೊಡುತ್ತಿದ್ದರು ಎಂಬ ಆರೋಪವೂ ರಿಜ್ವಾನ್ ಮೇಲಿತ್ತು. ಈ ಹಿಂದೆ ಹಲವು ಬಾರಿ ಪಂದ್ಯದ ವೇಳೆಯೂ ಅವರು ಮೈದಾನದಲ್ಲೇ ನಮಾಜ್ ಮಾಡಿಯೂ ಟೀಕೆಗೆ ಗುರಿಯಾಗಿದ್ದರು.ನಾಯಕರಾಗಿದ್ದ ವೇಳೆ ಟಾಸ್ ವೇಳೆಯೂ ತರಾತುರಿಯಲ್ಲಿ ನನನಗೆ ನಮಾಜ್ ಮಾಡಲು ತಡವಾಯಿತು ಎಂದು ಮೈದಾನ ತೊರೆದಿದ್ದ ಘಟನೆಯೂ ನಡೆದಿತ್ತು. ಇದೇ ಕಾರಣಕ್ಕೆ ಅವರ ಸ್ಥಾನಕ್ಕೆ ಕುತ್ತು ತಂದಿದೆ ಎನ್ನಲಾಗಿದೆ.
