ಉದಯವಾಹಿನಿ, ಚಿತ್ರದುರ್ಗ: ಮಸೀದಿ ನಿರ್ಮಾಣಕ್ಕೆ ಹಿಂದೂ, ಮುಸ್ಲಿಮರ ಮಧ್ಯೆ ನಗರಸಭೆ ಅಧಿಕಾರಿಗಳು ವಿವಾದ ಸೃಷ್ಟಿಸಿರುವ ಘಟನೆ ಚಿತ್ರದುರ್ಗದ ಸಾಧೀಕ್ ನಗರದಲ್ಲಿ ನಡೆದಿದೆ. ವಿವಾದದ ಬಳಿಕ ಎರಡೂ ಧರ್ಮದ ಮುಖಂಡರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹೌದು, ಈ ಹಿಂದೆ 2003ರಲ್ಲಿ ಎಂಎ ಸಾಧೀಕ್ ಎಂಬ ಡಿಸಿಯವರು ಕಡುಬಡ ಕೂಲಿ ಕಾರ್ಮಿಕರಿಗಾಗಿ 200 ಮನೆಗಳನ್ನು ಜಿಲ್ಲಾಡಳಿತದಿಂದ ನೀಡಿದ್ದರು. ಹೀಗಾಗಿ ಈ ಬಡಾವಣೆಯಲ್ಲಿ ಸುಮಾರು 100ಕ್ಕೂ ಅಧಿಕ ಹಿಂದೂ ಮನೆಗಳಿದ್ದು, ಮೂರು ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ.
ಆದರೆ 10-15 ಮುಸ್ಲಿಂ ನಿವಾಸಿಗಳಿರುವ ಬಡಾವಣೆಯಲ್ಲಿ ಒಂದು ಮಸೀದಿ ಸಹ ಇರಲಿಲ್ಲ. ಹೀಗಾಗಿ ಇಸ್ಲಾಂ ಧರ್ಮದ ಮುಖಂಡರು, ಅಲ್ಲೊಂದು ಖಾಸಗಿ ನಿವೇಶನ ಖರೀದಿಸಿ, ಮಸೀದಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ ಸಾಧಿಕ್ ನಗರದ ಸಮೀಪದಲ್ಲೇ ಇರುವ ಸರಸ್ವತಿಪುರಂ ಮತ್ತು ಸೂರ್ಯಪುತ್ರ ಸರ್ಕಲ್‌ನಲ್ಲಿ ಈಗಾಗಲೇ ಎರಡು ಮಸೀದಿಗಳಿವೆ.
ಹೀಗಾಗಿ, ಹಿಂದೂ ನಿವಾಸಿಗಳು ಈ ಕಾರ್ಯಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಗಮನಕ್ಕೂ ತಂದಿದ್ದು, ಈ ಅಕ್ರಮ ಮಸೀದಿ ನಿರ್ಮಾಣ ಕಾರ್ಯದಲ್ಲಿ ನಗರಸಭೆ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆಂದು ಆರೋಪಿಸಿದ್ದಾರೆ. ಕೂಡಲೇ ಮಸೀದಿ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.
