
ಉದಯವಾಹಿನಿ, ಆಂಧ್ರಪ್ರದೇಶ: ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆ ಹೊರತಾಗಿ ಶಾಲೆಯ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳಬಾರದು ಎಂಬ ನಿಯಮವಿದೆ. ಅಧ್ಯಾಪಕರ ತಮ್ಮ ವೈಯಕ್ತಿಕ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದು ಕೂಡ ನಿಯಮ ಉಲ್ಲಂಘನೆ ಮಾಡಿದಂತೆ. ಹಾಗಿದ್ದರೂ ಅನೇಕ ಕಡೆ ಇಂತಹ ನಿಯಮ ಉಲ್ಲಂಘನೆ ಆಗುತ್ತಲೇ ಇರುತ್ತದೆ. ಅಂತೆಯೇ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ಶಾಲಾ ಮಕ್ಕಳಿಂದ ತಮ್ಮ ಕಾಲುಗಳನ್ನು ಮಸಾಜ್ ಮಾಡಿಸಿಕೊಂಡ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಮೆಳಿಯಪುಟ್ಟಿ ಮಂಡಲದ ಬಂಡಪಲ್ಲಿ ಬಾಲಕಿಯರ ಬುಡಕಟ್ಟು ಆಶ್ರಮ ಶಾಲೆಯಲ್ಲಿ ನಡೆದಿದೆ. ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕಿಯೇ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಾ ಮಕ್ಕಳನ್ನೇ ಗುಲಾಮರಂತೆ ನಡೆಸಿಕೊಂಡ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿದೆ. ಎಲ್ಲೆಡೆ ಈ ಘಟನೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಂಡು ಆಕೆಯನ್ನು ಅಮಾನತ್ತು ಮಾಡಲಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಮುಖ್ಯೋಪಾಧ್ಯಾಯಿನಿ ಆರಾಮವಾಗಿ ಕುಳಿತುಕೊಂಡು ಯಾರೊಂದಿಗೊ ಫೋನಿನಲ್ಲಿ ಮಾತನಾಡುತ್ತಿದ್ದರು. ಶಿಕ್ಷಕಿಯ ಕಾಲಿನ ಬಳಿ ಇಬ್ಬರು ವಿದ್ಯಾರ್ಥಿ ಗಳು ಕುಳಿತುಕೊಂಡಿದ್ದರು. ಶಿಕ್ಷಕಿಯ ಪಾದ , ಮೊಣಕಾಲುಗಳನ್ನು ಒತ್ತಿ ಮಸಾಜ್ ಮಾಡುತ್ತಿದ್ದಾರೆ. ಇದನ್ನು ಶಾಲೆಯ ಸಿಬಂದಿಯೊಬ್ಬರು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಟ್ವಿಟ್ಟರ್ ಎಕ್ಸ್ ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
