ಉದಯವಾಹಿನಿ, ತಿರುವನಂತಪುರ: ಸಾರ್ವಜನಿಕ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ಸಹ ಪ್ರಯಾಣಿಕರಿಂದ ಲೈಂಗಿಕ ಕಿರುಕುಳಕ್ಕೊಳಗಾದರೂ ಧೈರ್ಯದಿಂದ ಎದುರಿಸಿದ್ದಾಳೆ. ಕೇರಳದ ತಿರುವನಂತಪುರ ಜಿಲ್ಲೆಯ ಕಟ್ಟಕಡ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೌನವಾಗಿರುವ ಬದಲು, ಆ ವ್ಯಕ್ತಿಯ ಕೃತ್ಯಗಳನ್ನು ಮೊದಲು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿ ನಂತರ ಆತನನ್ನು ಎದುರಿಸಿದ್ದಾಳೆ. ಬಸ್ ಕಂಡಕ್ಟರ್ ತಕ್ಷಣ ಅವಳ ರಕ್ಷಣೆಗೆ ಬಂದರೂ, ಇತರ ಪ್ರಯಾಣಿಕರಲ್ಲಿ ಯಾರೂ ಕೂಡ ತಮ್ಮ ಆಸನಗಳಿಂದ ಕದಲಲಿಲ್ಲ. ಯುವಕ ಅನುಚಿತವಾಗಿ ವರ್ತಿಸಿರುವ ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಈ ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಬಸ್ಸಿನಲ್ಲಿ ಯುವತಿಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ವಾಹನದ ಚಲನೆಯನ್ನು ನೆಪವಾಗಿ ಬಳಸುತ್ತಿದ್ದಂತೆ ತೋರುತ್ತಿದ್ದು, ಆಗಾಗ ಸ್ಪರ್ಶಿಸುತ್ತಿದ್ದ. ಶೀಘ್ರದಲ್ಲೇ ಅವನ ನಡವಳಿಕೆ ತೀವ್ರಗೊಂಡಿತು. ಧೃತಿಗೆಡದ ಯುವತಿಯು ಆತನನ್ನು ಎದುರಿಸಲು ಮುಂದಾಗಿದ್ದಾಳೆ. ಮೊದಲಿಗೆ ಘಟನೆಯನ್ನು ತನ್ನ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾಳೆ. ಆತನ ಕೈಗೆ ಹೊಡೆದು ನಂತರ ಅವನ ಮುಖವನ್ನು ಕ್ಯಾಮರಾಗೆ ತೋರಿಸುತ್ತಾ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ.
ಚಲಿಸುತ್ತಿರುವ ಬಸ್ಸಿನಲ್ಲಿ ಇತರ ಪ್ರಯಾಣಿಕರು ಘಟನೆ ನಡೆಯುವುದನ್ನು ನೋಡುತ್ತಿದ್ದರೂ ಯಾರೂ ಕೂಡ ಆಕೆಯ ಸಹಾಯಕ್ಕೆ ಧಾವಿಸಲಿಲ್ಲ. ಅವಳು ಆ ವ್ಯಕ್ತಿಗೆ ಹೊಡೆಯುವುದನ್ನು ಮುಂದುವರಿಸಿದಳು. ಇದನ್ನು ಗಮನಿಸಿದ ಬಸ್ ಕಂಡಕ್ಟರ್ ಆಕೆಯ ಬಳಿಗೆ ಬಂದು ವಿಚಾರಿಸಿದ್ದಾರೆ. ಯುವತಿ ಆ ವ್ಯಕ್ತಿ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾನೆಂದು ತಿಳಿಸಿದಳು. ಬಳಿಕ ಕಂಡಕ್ಟರ್ ಯಾವ ರೀತಿ ವರ್ತಿಸಿದರು ಹಾಗೂ ಆ ಯುವತಿ ಆರೋಪಿ ವಿರುದ್ಧ ಯಾವುದೇ ದೂರು ದಾಖಲಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!