ಉದಯವಾಹಿನಿ, ಜಕಾರ್ತ: ಇಂಡೋನೇಷ್ಯಾದ ಜಕಾರ್ತದಯಲ್ಲಿರುವ ಪ್ರೌಢಶಾಲೆಯೊಂದರ ಮಸೀದಿಯಲ್ಲಿ ಶುಕ್ರವಾರ ಪ್ರಾರ್ಥನೆ ಸಮಯದಲ್ಲಿ ಸರಣಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಕನಿಷ್ಠ 54 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಜಕಾರ್ತಾದ ಕೆಲಪಾ ಗೇಡಿಂಗ್ ಪ್ರದೇಶದ ನೌಕಾಪಡೆಯ ಕಾಂಪೌಂಡ್‌ನಲ್ಲಿರುವ ರಾಜ್ಯ ಪ್ರೌಢಶಾಲೆಯಾದ ಎಸ್‌ಎಂಎ 27 ರಲ್ಲಿ ಮಧ್ಯಾಹ್ನದ ಸುಮಾರಿಗೆ ಈ ಘಟನೆ ನಡೆದಿದೆ. ಪ್ರವಚನ ಆರಂಭವಾದ ಕೂಡಲೇ ಎರಡು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೀದಿಯಲ್ಲಿ ದಟ್ಟವಾದ ಬೂದು ಹೊಗೆ ತುಂಬಿದಾಗ ಜನರು ಅಲ್ಲಿಂದ ಏಕಾ ಏಕಿ ಓಡಲು ಪ್ರಾರಂಭಿಸಿದರು. ಜಕಾರ್ತಾ ಪೊಲೀಸ್ ಮುಖ್ಯಸ್ಥ ಅಸೆಪ್ ಎಡಿ ಸುಹೇರಿ ಅವರ ಪ್ರಕಾರ, ಹೆಚ್ಚಿನ ಗಾಜು ಮತ್ತು ಅವಶೇಷಗಳಿಂದ ಗಾಯಗೊಂಡಿದ್ದಾರೆ. ಹಲವರಿಗೆ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದರೂ, ಸುಮಾರು 20 ವಿದ್ಯಾರ್ಥಿಗಳು ಇನ್ನೂ ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸ್ಫೋಟದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದಾಗ್ಯೂ, ಆರಂಭಿಕ ವರದಿಗಳು ಮಸೀದಿಯ ಧ್ವನಿವರ್ಧಕ ವ್ಯವಸ್ಥೆಯ ಬಳಿಯ ಪ್ರದೇಶದಿಂದ ಸ್ಫೋಟಗಳು ಸಂಭವಿಸಿವೆ ಎಂದು ಸೂಚಿಸುತ್ತವೆ. ನಂತರ ಸ್ಥಳಕ್ಕೆ ಕಳುಹಿಸಲಾದ ಬಾಂಬ್ ವಿರೋಧಿ ದಳವು ಘಟನಾ ಸ್ಥಳದ ಬಳಿ ರೈಫಲ್‌ಗಳು ಮತ್ತು ಗನ್ ಅನ್ನು ಪತ್ತೆ ಮಾಡಿವೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಮಸೀದಿ ಸುತ್ತ ಮುತ್ತಲು ಶೋಧ ಕಾರ್ಯ ನಡೆಸಲಾಗುತ್ತಿದೆ.
