ಉದಯವಾಹಿನಿ, ಆಯುರ್ವೇದದಲ್ಲಿ ಅರಿಶಿನವು ಅದರ ಔಷಧೀಯ ಗುಣಗಳಿಂದ ಪ್ರಸಿದ್ಧವಾಗಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯಕವಾಗಿದೆ. ಅಡುಗೆಯಲ್ಲಿ ಅರಿಶಿನಕ್ಕೆ ವಿಶೇಷ ಸ್ಥಾನವಿದೆ. ಅನೇಕರು ಅರಿಶಿನ ಹಾಲು ಅಥವಾ ಅರಿಶಿನ ನೀರನ್ನು ಕುಡಿಯಲು ಇಷ್ಟಪಡುತ್ತಾರೆ.
ಅರಿಶಿನವು ಸತು, ಮ್ಯಾಂಗನೀಸ್, ಕರ್ಕ್ಯುಮಿನ್, ಉತ್ಕರ್ಷಣ ನಿರೋಧಕ, ಉರಿಯೂತದ, ಆಂಟಿಮೈಕ್ರೊಬಿಯಲ್ ಗುಣಗಳನ್ನು ಒಳಗೊಂಡಿದೆ. ಅರಿಶಿನ ನೀರಿನಿಂದ ಅನೇಕ ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭಿಸುತ್ತವೆ. ಅರಿಶಿನವು ಮುಖದ ಸೌಂದರ್ಯಕ್ಕೂ ಅತ್ಯುತ್ತಮವಾಗಿದೆ. ಅರಿಶಿನ ನೀರನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೆಮ್ಮು ಹಾಗೂ ಶೀತವನ್ನು ತಡೆಯುತ್ತದೆ. ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ ಎಂದು ಆಯುರ್ವೇದದ ತಜ್ಞರು ತಿಳಿಸುತ್ತಾರೆ.
ರೋಗನಿರೋಧಕ ಶಕ್ತಿ ವೃದ್ಧಿ: ಅರಿಶಿನದಲ್ಲಿರುವ ಕರ್ಕ್ಯೂಮಿನ್ ಶಕ್ತಿಯುತ ಆ್ಯಂಟಿಆಕ್ಸಿಡೆಂಟ್ ಆಗಿದೆ. ದೇಹದ ಉರಿಯೂತ ಕಡಿಮೆ ಮಾಡುತ್ತದೆ ಹಾಗೂ ಬ್ಯಾಕ್ಟೀರಿಯಾ, ವೈರಸ್‌ಗಳಿಂದ ರಕ್ಷಣೆ ನೀಡುತ್ತದೆ. ನಿತ್ಯ ಬೆಳಗ್ಗೆ ಅರಿಶಿನ ನೀರನ್ನು ಕುಡಿಯುವುದರಿಂದ ಚಳಿಗಾಲದ ಸಮಯದಲ್ಲಿಯೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಜೀರ್ಣಕ್ರಿಯೆ ಸಹಾಯಕಾರಿ: ಅರಿಶಿನದಲ್ಲಿ ಉತ್ತಮ ಕೋಶಗಳ ಉತ್ಪತ್ತಿಯನ್ನು ಉತ್ತೇಜಿಸುವ ಗುಣವನ್ನು ಹೊಂದಿದೆ. ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಲು ಹೆಚ್ಚು ಸಹಾಯ ಮಾಡುತ್ತದೆ. ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡಲು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವನೆ ಮಾಡಬಹುದು. ದೇಹದ ವಿಷಕಾರಕಗಳನ್ನು ಹೊರಹಾಕುತ್ತದೆ ಹಾಗೂ ಯಕೃತ್ತು ಶುದ್ಧಗೊಳಿಸಿ, ಅದರ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ನಿತ್ಯ ಈ ಅರಿಶಿನದ ನೀರನ್ನು ಕುಡಿಯುವುದರಿಂದ ದೇಹವು ಶುದ್ಧವಾಗುತ್ತದೆ.
ಚರ್ಮದ ಆರೋಗ್ಯಕ್ಕೆ ಉತ್ತಮ: ಅರಿಶಿನ ಉರಿಯೂತ ನಿವಾರಕ ಗುಣ ಹೊಂದಿದೆ. ಮೊಡವೆ ಹಾಗೂ ಚರ್ಮದ ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ. ಮೆಟಾಬಾಲಿಸಂ ಹೆಚ್ಚಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಅರಿಶಿನ ಕೊಬ್ಬು ಸಂಗ್ರಹ ಕಡಿಮೆ ಮಾಡಿ ಶಕ್ತಿಯನ್ನು ವೃದ್ಧಿಸುತ್ತದೆ. ಬೆಳಗ್ಗೆ ಈ ನೀರನ್ನು ಕುಡಿಯುವುದರಿಂದ ಮೆಟಾಬಾಲಿಸಂ ವೃದ್ಧಿಸಲು ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.ತಜ್ಞರು ಹೇಳುವುದೇನು? ಅರಿಶಿನ ನೀರನ್ನು ಎಷ್ಟು ಪ್ರಮಾಣದಲ್ಲಿ ಹಾಗೂ ಹೇಗೆ ಕುಡಿಯಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆಯನ್ನು ಅವಲಂಬಿಸಿರುತ್ತದೆ. ಎಲ್ಲರಿಗೂ ಅರಿಶಿನ ನೀರು ಹಿಡಿಸುವುದಿಲ್ಲ, ಇದರಿಂದ ತಜ್ಞರ ಸಲಹೆಯ ಪ್ರಕಾರ ಮಾತ್ರ ಇದನ್ನು ಕುಡಿಯಬೇಕು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
