ಉದಯವಾಹಿನಿ, ರಾಮನಗರ: ಅರ್ಕಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ಎರಡು ಕಾಡಾನೆಗಳು ಮೃತಪಟ್ಟ ಘಟನೆ ಕನಕಪುರ ತಾಲೂಕಿನ ಸಾತನೂರು ಅರಣ್ಯ ವಲಯದ ವ್ಯಾಪ್ತಿಯ ಕುನ್ನೂರು ಗ್ರಾಮದ ಬಳಿ ನಡೆದಿದೆ. ಕಾಡಾನೆಗಳು ಹಿನ್ನೀರು ದಾಟಲು ಮುಂದಾದಾಗ, ನೀರಿನಲ್ಲಿ ಆವರಿಸಿರುವ ಜೊಂಡಿನಲ್ಲಿ (ನೀರಿನ ಕಳೆ) ಸಿಲುಕಿವೆ. ಮುಂದಕ್ಕೆ ಮತ್ತು ಹಿಂದಕ್ಕೆ ಹೋಗಲಾಗದೆ ಅಲ್ಲೇ ಒದ್ದಾಡಿ ಕಾಡಾನೆಗಳು ಮೃತಪಟ್ಟಿವೆ ಎನ್ನಲಾಗಿದೆ. ಹಿನ್ನೀರಿನಲ್ಲಿ ಕಾಡಾನೆಗಳು ಇರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಗಳ ಕಳೇಬರವನ್ನು ಹಿನ್ನೀರಿನಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದ್ದು, ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
