ಉದಯವಾಹಿನಿ, ಬಿರ್ಗುಂಜ್ : ಬಿಹಾರ ವಿಧಾನಸಭಾ ಚುನಾವಣೆಗೆ ನಾಳೆ ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಭದ್ರತೆಯ ಹಿತದೃಷ್ಟಿಯಿಂದ ರಾಜ್ಯವು ನೇಪಾಳದ ಜೊತೆ ಹಂಚಿಕೊಂಡಿರುವ ಬಿರ್ಗುಂಜ್-ರಕ್ಸೌಲ್ ಗಡಿ ಸೇರಿದಂತೆ ಹಲವು ಗಡಿ ಪ್ರದೇಶಗಳನ್ನು 72 ಗಂಟೆಗಳ ಕಾಲ ಮುಚ್ಚಲಾಗಿದೆ.ಈ ಕುರಿತು ಮಾಹಿತಿ ನೀಡಿರುವ ಮಹೋಟ್ಟರಿ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಸಂಜಯ್ ಕುಮಾರ್ ಪೋಖ್ರೆಲ್ ಅವರು, “ನವೆಂಬರ್​ 11ರಂದು ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ಭದ್ರತಾ ಕ್ರಮವಾಗಿ ಗಡಿ ಬಂದ್​ ಮಾಡಲಾಗುವುದು. ಮಹೋಟ್ಟರಿ ಜಿಲ್ಲೆಯ  ಗಡಿಗಳು ಬಂದ್​ ಆಗಲಿವೆ.  ಗಡಿಯಲ್ಲಿ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ನವೆಂಬರ್​ 11ರ ಮರುದಿನ ಗಡಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ​” ಎಂದು ಮಾಹಿತಿ ನೀಡಿದರು.ನೇಪಾಳ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಗಡಿಯಲ್ಲಿರುವ 20 ಜಿಲ್ಲೆಗಳ ಒಟ್ಟು 122 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಮತಪ್ರಚಾರ ಭಾನುವಾರ ಮುಕ್ತಾಯಗೊಂಡಿದೆ. ಎನ್​ಡಿಎ ಮತ್ತು ಮಹಾಘಟಬಂಧನ್​ ನಾಯಕರು ಅಂತಿಮ ಕ್ಷಣದವರೆಗೂ ಮತಯಾಚನೆ ನಡೆಸಿದ್ದರು.ಒಟ್ಟು 1,302 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3.7 ಕೋಟಿಗೂ ಹೆಚ್ಚು ಅರ್ಹ ಮತದಾರರಿದ್ದಾರೆ. 100 ವರ್ಷಕ್ಕಿಂತ ಮೇಲ್ಪಟ್ಟ 6255 ಮತದಾರರಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಸಾರಾಮ್‌ನಲ್ಲಿ ಮತಬೇಟೆ ನಡೆಸಿ, ರಕ್ಷಣಾ ಕಾರಿಡಾರ್‌ಗೆ ಯೋಜನೆಗಳನ್ನು ಘೋಷಿಸಿದ್ದರು. ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ದಾಳಿಗೆ ನಿರ್ಣಾಯಕ ಪ್ರತಿಕ್ರಿಯೆ ನೀಡುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!