ಉದಯವಾಹಿನಿ: ಸಂಜೆ ಇಲ್ಲವೇ ಬೆಳಗಿನ ಉಪಹಾರಕ್ಕೆ ಸರಿಹೊಂದುವ ಬಾಯಲ್ಲಿ ನೀರೂರಿಸುವಂತಹ ಸೂಪರ್ ರೆಸಿಪಿ ನಿಮಗಾಗಿ ನಾವು ತಂದಿದ್ದೇವೆ. ಅದುವೇ, ಸಖತ್ ಟೇಸ್ಟಿ ಮಂಗಳೂರು ಬನ್ಸ್ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಬನ್ಸ್ ಅನ್ನು ಮಾಗಿದ ಬಾಳೆಹಣ್ಣಿನ ತಿರುಳಿನಿಂದ ತಯಾರಿಸಲಾಗುತ್ತದೆ.ಈ ಬನ್ಸ್ ಮಾಡಲು ಕಡಿಮೆ ಸಮಯ ಸಾಕು. ಈ ರೆಸಿಪಿಯು ಆರೋಗ್ಯಕ್ಕೆ ಉತ್ತಮವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರಿಗೂ ಈ ಬನ್ಸ್ ಇಷ್ಟವಾಗುತ್ತದೆ. ಈ ಬನ್ಸ್ಗಳು ಹೆಚ್ಚು ಎಣ್ಣೆಯಲ್ಲಿ ಹೀರಿಕೊಳ್ಳುವುದಿಲ್ಲ. ಇದೀಗ ಮಂಗಳೂರು ಬನ್ಸ್ ತಯಾರಿಸುವುದು ಹೇಗೆ ಎಂಬುದನ್ನು ವಿವರವಾಗಿ ತಿಳಿಯೋಣ.
ಗೋಧಿ ಇಲ್ಲವೇ ಮೈದಾ – 1 ಕಪ್
ಬಾಳೆಹಣ್ಣು – ಎರಡು
ಜೀರಿಗೆ – 1 ಟೀಸ್ಪೂನ್
ಮೊಸರು – 3 ಟೀಸ್ಪೂನ್
ಸಕ್ಕರೆ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ – 2 ಟೀಸ್ಪೂನ್
ಎಣ್ಣೆ- ಕರಿಯಲು ಬೇಕಾದಷ್ಟು
ಮೊದಲು ಒಂದು ಪಾತ್ರೆಗೆ ಮಾಗಿದ ಬಾಳೆಹಣ್ಣು ಜೀರಿಗೆ, ಬೆಲ್ಲ, ಸಕ್ಕರೆ, ಮೊಸರು ಹಾಕಿ ಚೆನ್ನಾಗಿ ವಿಶ್ರಣ ಮಾಡಬೇಕು.
ಬಳಿಕ ಮೈದಾ ಅಥವಾ ಗೋಧಿ ಹಿಟ್ಟನ್ನು ಇದರಲ್ಲಿ ಹಾಕಿ ನೀರು ಹಾಕದೇ ಹಿಟ್ಟನ್ನು ಚಪಾತಿ ಹಿಟ್ಟಿನ ಹದದಲ್ಲಿ ನಾದಿಕೊಳ್ಳಬೇಕು.
ಈ ಹಿಟ್ಟನ್ನು 5ರಿಂದ 6 ತಾಸು ಮುಚ್ಚಿ ನೆನೆಯಲು ಬಿಡಬೇಕು. ಬಳಿಕ ಹಿಟ್ಟನ್ನು ಇನ್ನೊಮ್ಮೆ ಮಿಶ್ರಣ ಮಾಡಿ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಪೂರಿ ಆಕಾರದಲ್ಲಿ ಲಟ್ಟಿಸಿಕೊಳ್ಳಿ.ಈಗ ಒಲೆ ಆನ್ ಮಾಡಿ ಅದರ ಮೇಲೆ ಕಡಾಯಿ ಇಟ್ಟು ಬನ್ಸ್ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಬನ್ಸ್ಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಹಾಕಿ.ಬನ್ಸ್ಗಳು ಬಣ್ಣ ಬದಲಾಗುವವರೆಗೆ ಎರಡೂ ಬದಿಯಲ್ಲಿ ತಿರುಗಿಸಿ ಕರಿಯಿರಿ.
ಎಲ್ಲಾ ಬನ್ಸ್ ಗಳನ್ನು ಈ ರೀತಿಯಲ್ಲಿ ಕರಿದ ಬಳಿಕ ಈ ಬನ್ಸ್ಗಳನ್ನು ತೆಂಗಿನಕಾಯಿ ಚಟ್ನಿ, ಸಾಗು, ಸಾಂಬಾರ್ ಜೊತೆಗೆ ಸವಿಯಬಹುದು.
ಈ ಬನ್ಸ್ ತುಂಬಾ ಮೃದು ಹಾಗೂ ರುಚಿಕರವಾಗಿವೆ. ನೀವು ಮನೆಯಲ್ಲಿ ಬನ್ಸ್ ತಯಾರಿಸಲು ಬಯಸಿದರೆ ಪ್ರಯತ್ನಿಸಿ ನೋಡಿ.
