ಉದಯವಾಹಿನಿ, ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ ಅವರ ಉನ್ನತ ಸಹಾಯಕ ಸೆರ್ಗಿಯೊ ಗೋರ್‌ ಅವರು ಭಾರತದಲ್ಲಿನ ಅಮೆರಿಕದ ರಾಯಭಾರಿಯಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಬಲಪಡಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭರವಸೆ ವ್ಯಕ್ತಪಡಿಸಿದ್ದಾರೆ. ಓವಲ್‌ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ ಡಿ ವ್ಯಾನ್‌್ಸ ಅವರು ಗೋರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಟ್ರಂಪ್‌ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಖಜಾನೆ ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌‍, ಅಮೆರಿಕದ ಅಟಾರ್ನಿ ಜನರಲ್‌ ಪ್ಯಾಮ್‌ ಬೋಂಡಿ, ಕೊಲಂಬಿಯಾ ಜಿಲ್ಲೆಯ ಅಮೆರಿಕದ ಅಟಾರ್ನಿ ಜೀನೈನ್‌ ಪಿರೊ, ಹಾಗೆಯೇ ಸೆನೆಟರ್‌ ಲಿಂಡ್ಸೆ ಗ್ರಹಾಂ ಮತ್ತು ರಾಜಕೀಯ ಕಾರ್ಯಕರ್ತೆ ಚಾರ್ಲಿ ಕಿರ್ಕ್‌ ಅವರ ವಿಧವೆ ಎರಿಕಾ ಕಿರ್ಕ್‌, ಇತರ ಅಧಿಕಾರಿಗಳು ಮತ್ತು ಶಾಸಕರು ಭಾಗವಹಿಸಿದ್ದರು.
ಟ್ರಂಪ್‌ ಕೈಕುಲುಕಿ ಅಭಿನಂದಿಸುತ್ತಿದ್ದಂತೆ ಗೋರ್‌ ಅವರ ಪ್ರಮಾಣ ವಚನವನ್ನು ಹಾಜರಿದ್ದವರು ಭಾರಿ ಚಪ್ಪಾಳೆ ಮತ್ತು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಿದರು.ಈಗ ನಮ್ಮ ದೇಶದ ಪ್ರಮುಖ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಒಂದನ್ನು ಬಲಪಡಿಸಲು ಸೆರ್ಗಿಯೊ ಸಹಾಯ ಮಾಡುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದರು.ಮತ್ತು ಅದು ಭಾರತ ಗಣರಾಜ್ಯದೊಂದಿಗಿನ ಕಾರ್ಯತಂತ್ರದ ಪಾಲುದಾರಿಕೆ.ಇದನ್ನು ದೊಡ್ಡ ವಿಷಯ ಎಂದು ಕರೆದ ಟ್ರಂಪ್‌‍, ಭಾರತವು ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾದ, ವಾಸ್ತವವಾಗಿ ವಿಶ್ವದ ಅತಿದೊಡ್ಡ ದೇಶಕ್ಕೆ ನೆಲೆಯಾಗಿದೆ ಮತ್ತು ಇದು 1.5 ಶತಕೋಟಿಗೂ ಹೆಚ್ಚು ಜನರನ್ನು ಹೊಂದಿದೆ ಎಂದು ಹೇಳಿದರು.
ಗೋರ್‌ ಅಮೆರಿಕದ ಅತ್ಯುತ್ತಮ ಪ್ರತಿನಿಧಿಯಾಗಲಿದ್ದಾರೆ ಎಂದು ಅವರು ಹೇಳಿದರು. ಮತ್ತು ಇದು ಒಂದು ದೊಡ್ಡ ವಿಷಯ. ಭಾರತಕ್ಕೆ ರಾಯಭಾರಿಯಾಗುವುದು ಒಂದು ದೊಡ್ಡ ವಿಷಯ. ಆದ್ದರಿಂದ ಸೆರ್ಗಿಯೊ, ಅಭಿನಂದನೆಗಳು. ನೀವು ಅದ್ಭುತ ಕೆಲಸ ಮಾಡಲಿದ್ದೀರಿ ಎಂದು ನನಗೆ ತಿಳಿದಿದೆ ಎಂದು ಟ್ರಂಪ್‌ ಹೇಳಿದರು.ಅಮೆರಿಕ ಸೆನೆಟ್‌ ಅಕ್ಟೋಬರ್‌ನಲ್ಲಿ ಗೋರ್‌ ಅವರನ್ನು ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಸೇವೆ ಸಲ್ಲಿಸಲು ದೃಢಪಡಿಸಿತ್ತು.

Leave a Reply

Your email address will not be published. Required fields are marked *

error: Content is protected !!