ಉದಯವಾಹಿನಿ, ಬೆಂಗಳೂರು: ಗುರು-ಹಿರಿಯರು ನಿಶ್ಚಯ ಮಾಡಿದ ಮದ್ವೆಗಳೇ ಮುರಿದು ಬೀಳುವ ಕಾಲ ಇದು. ಅಂತದ್ದರಲ್ಲಿ ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳುತ್ತೆ ಹೇಳಿ? ಇತ್ತೀಚೆಗೆ ಡೇಟಿಂಗ್ ಆ್ಯಪ್ ಗಳ ಜಾಲ ಹೆಚ್ಚಾಗಿದೆ. ಹಣ ಕಟ್ಟಿ ರಿಜಿಸ್ಟರ್ ಮಾಡ್ಕೊಂಡ್ರೆ ಹುಡುಗನದ್ದೋ ಹುಡುಗಿಯದ್ದೋ ನಂಬರ್ ಸಿಗುತ್ತೆ. ಅಮೇಲೆ ಶುರುವಾಗೋದೇ ಅಸಲಿ ಆಟ. ಕೆಲ ಘಟನೆಗಳಲ್ಲಿ ಹೆಣ್ಣುಮಕ್ಕಳು ಯಾಮಾರಿದ್ರೆ, ಇನ್ನೂ ಕೆಲ ಪ್ರಕರಣಗಳ್ಳಿ ಗಂಡುಹೈಕಳನ್ನೇ ಯಾಮಾರಿಸುವ ಖತರ್ನಾಕ್ ಮಹಿಳೆಯರು ಇರ್ತಾರೆ. ಅಂತಹದ್ದೇ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಾಯಗಾತಿ ನಂಬಿ ಲಾಡ್ಜ್‌ಗೆ ಹೋಗಿದ್ದ ಯುವಕ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರು ಇಂದಿರಾನಗರದಲ್ಲಿ ನಡೆದಿದೆ.
ಹೌದು. ಸ್ಥಳೀಯ ಯುವಕನಿಗೆ ಡೇಟಿಂಗ್ ಆಪ್‌ನಲ್ಲಿ 2 ತಿಂಗಳ ಹಿಂದೆ ಕವಿಪ್ರಿಯಾ ಹೆಸರಿನ ಮಾಯಗಾತಿ ಪರಿಚಯವಾಗಿದ್ದಾಳೆ. ನವೆಂಬರ್ 1ರಂದು ಇಬ್ಬರೂ ಇಂದಿರಾನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದರು. ಎಣ್ಣೆ ಪಾರ್ಟಿ ಕೂಡ ಮಾಡಿದ್ದರು. ಎಣ್ಣೆ ಪಾರ್ಟಿ ಬಳಿಕ ಕವಿಪ್ರಿಯಾ ಯುವಕನನ್ನ ಲಾಡ್ಜ್‌ಗೆ ಕರೆದೊಯ್ದಿದ್ದಾಳೆ. ಮಧ್ಯರಾತ್ರಿ ತಾನೇ ಊಟ ಆರ್ಡರ್ ಮಾಡಿ ತರಿಸಿಕೊಂಡಿದ್ದಾಳೆ. ನಂತರ ಕವಿಪ್ರಿಯಾ ಕೊಟ್ಟ ನೀರು ಕುಡಿದ ಯುವಕ ಪ್ರಜ್ಞೆ ತಪ್ಪಿದ್ದಾನೆ. ಬೆಳಗ್ಗೆ ಕಣ್ಣು ಬಿಟ್ಟು ನೋಡಿದ್ರೆ ಆಕೆಯೂ ಇರಲಿಲ್ಲ. ತನ್ನ ಬಳಿ ಇದ್ದ ಚಿನ್ನ, ಹಣ ಎಲ್ಲವೂ ನಾಪತ್ತೆಗಿದೆ. ದುಬಾರಿ ಹೆಡ್ ಸೆಟ್, 28 ಗ್ರಾಂ. ಚಿನ್ನದ ಸರ, 30 ಗ್ರಾಂ ಚಿನ್ನದ ಕೈ ಬಳೆ, 10 ಸಾವಿರ ರೂ. ನಗದು ಸೇರಿ ಒಟ್ಟು 6.89 ಲಕ್ಷದ ವಸ್ತುಗಳು ನಾಪತ್ತೆಯಾಗಿದೆ.
