ಉದಯವಾಹಿನಿ, ಮಂಡ್ಯ: ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ದೆಹಲಿಯ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟಗೊಂಡ ಘಟನೆ ದೇಶದ ಜನರನ್ನ ಆತಂಕಗೊಳಿಸಿದೆ. ಈ ಘಟನೆಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಿದೆ. ಅದರಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದ್ರೆ ಇಲ್ಲಿ ಅಗತ್ಯದಷ್ಟು ಸಿಸಿಟಿವಿ ಕ್ಯಾಮೆರಾಗಳಾಗಲಿ ಹಾಗೂ ಭದ್ರತಾ ಸಿಬ್ಬಂದಿಗಳಾಗಲಿ ಇಲ್ಲ ಅನ್ನೋದು ಕಳವಳಕಾರಿಯಾಗಿದೆ.
ಕೆಆರ್‌ಎಸ್ ಜಲಾಶಯಕ್ಕೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಭದ್ರತೆ ನೀಡುತ್ತಿದೆ. ಆದ್ರೆ ಇಲ್ಲಿ ಕೇವಲ 4 ಸಿಸಿಟಿವಿ ಕ್ಯಾಮೆರಾಗಳು ಅಷ್ಟೇ ಕಾರ್ಯನಿರ್ವಹಣೆ ಮಾಡುತ್ತಿವೆ. ಕೆಆರ್‌ಎಸ್ ಡ್ಯಾಂ ಹಾಗೂ ಇಡೀ ಬೃಂದಾವನ ಕಣ್ಗಾವಲಿಗೆ 70 ರಿಂದ 80 ಸಿಸಿಟಿವಿ ಕ್ಯಾಮೆರಾಗಳ ಅಗತ್ಯವಿದೆ. ಆದ್ರೆ ಇರೋದು ಕೇವಲ 4 ಸಿಸಿಟಿವಿ ಕ್ಯಾಮೆರಾ.
ಇನ್ನೂ ಭದ್ರತಾ ಸಿಬ್ಬಂದಿ ವಿಚಾರಕ್ಕೆ, ಜಲಾಶಯದ ಸುತ್ತಲಿನ ಭದ್ರತೆಗೆ 260 ಸಿಬ್ಬಂದಿಗಳ ಅಗತ್ಯವಿದೆ. ಆದ್ರೆ ಕೇವಲ 65 ಸಿಬ್ಬಂದಿ ಇದ್ದಾರೆ. ಇದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇರೋರಿಗೆ ರಜೆ ಸರಿಯಾಗಿ ಸಿಗದ ಕಾರಣ ಕೆಲವರು ನಿರಾಸಕ್ತಿ ವಹಿಸುತಯ್ತಿದ್ದಾರೆ. ಹೀಗಾಗಿ ಭದ್ರತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.
