ಉದಯವಾಹಿನಿ, ನವದೆಹಲಿ: ದೆಹಲಿ ಸ್ಫೋಟದ ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳ ಎದುರು ಒಂದೊಂದೇ ಸತ್ಯ ತೆರೆದುಕೊಳ್ಳುತ್ತಿದೆ. ಮಾರುತಿ ಸುಜುಕಿ ಬ್ರೆಝಾ , ಮಾರುತಿ ಸ್ವಿಫ್ಟ್ ಡಿಜೈರ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಮೂವತ್ತೆರಡು ಕಾರುಗಳನ್ನು ಸ್ಫೋಟಕ ವಸ್ತುಗಳನ್ನು ಸಾಗಿಸಲು ಮತ್ತು ಬಾಂಬ್‌ಗಳನ್ನು ತಲುಪಿಸಲು ಸಿದ್ಧಪಡಿಸಲಾಗುತ್ತಿತ್ತು ಎಂಬ ಮಾಹಿತಿ ಇದೀಗ ತಿಳಿದು ಬಂದಿದೆ. ಸೋಮವಾರ ಸಂಜೆ ಸ್ಫೋಟಗೊಂಡ ಹುಂಡೈ ಐ20 ಸೇರಿದಂತೆ ಒಟ್ಟು 32 ಕಾರುಗಳನ್ನು ಅಯೋಧ್ಯೆ ಸೇರಿದಂತೆ ಹಲವು ಸ್ಥಳಗಳನ್ನು ಗುರಿಯಾಗಿಸಲಾಗಿತ್ತು ಎಂದು ತಿಳಿದು ಬಂದಿದೆ.
DL10 CK 0458 ನೋಂದಣಿ ಸಂಖ್ಯೆ ಹೊಂದಿರುವ ಇಕೋಸ್ಪೋರ್ಟ್ ಕಾರು ಬುಧವಾರ ತಡರಾತ್ರಿ ಹರಿಯಾಣದ ಫರಿದಾಬಾದ್‌ನಲ್ಲಿ ಪತ್ತೆಯಾಗಿದ್ದು, ಈಗ ಅದು ಈ ಭಯೋತ್ಪಾದಕ ಘಟಕದ ಕಾರ್ಯಾಚರಣೆಯ ನೆಲೆಯಾಗಿರುವಂತೆ ತೋರುತ್ತಿದೆ. ಹಿಂದಿನ ಸೀಟಿನಲ್ಲಿ ಮಲಗಿದ್ದ ಯುವಕನ ಗುರುತು ಪತ್ತೆಯಾಗಿಲ್ಲ, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬ್ರೆಝಾ ಕಾರು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ಆವರಣದಲ್ಲಿ ಪತ್ತೆಯಾಗಿದೆ , ಈ ಸಂಸ್ಥೆಯು ಭಯೋತ್ಪಾದಕರ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ.
ಮತ್ತೆರಡು ಕಾರುಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದರಂತೆ ದೆಹಲಿ ಪೊಲೀಸರು ಎಲ್ಲಾ ಪೊಲೀಸ್ ಠಾಣೆಗಳು, ಪೊಲೀಸ್ ಔಟ್‌ಪೋಸ್ಟ್‌ಗಳು ಮತ್ತು ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕೆಂಪು ಫೋರ್ಡ್ ಇಕೋಸ್ಪೋರ್ಟ್ ಕುರಿತು ಮಾಹಿತಿ ನೀಡಿದ್ದರು. ಇದರಂತೆ ಫರೀದಾಬಾದ್ ನಲ್ಲಿ 2ನೇ ಕಾರು ಪತ್ತೆಯಾಗಿದ್ದು, ಇದೀಗ ಮೂರನೇ ಕಾರಿಗಾಗಿ ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ಹುಡುಕಾಟ ನಡೆಸುತ್ತಿವೆ.
