ಉದಯವಾಹಿನಿ, ಕೊಯಮತ್ತೂರು: ಭಾರತದ ಪ್ರೀಮಿಯರ್ ರೇಸಿಂಗ್ ಚಾಂಪಿಯನ್‌ಶಿಪ್ ಜೆಕೆ ಟೈರ್ ಎಫ್‌ಎಂಎಸ್‌ಸಿಐ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್ ನವೆಂಬರ್ 15–16 ರಂದು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇ ಅದ್ಭುತ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. 28ನೇ ಆವೃತ್ತಿಗೆ ಕಾಲಿಟ್ಟಿರುವ ಈ ಚಾಂಪಿಯನ್‌ಶಿಪ್ ಭಾರತದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ರೇಸಿಂಗ್ ಸರಣಿಯಾಗಿದೆ. ಈ ಬಾರಿ ವಿಶೇಷ ಅತಿಥಿಯಾಗಿ ಅಮೆರಿಕದ ರೇಸಿಂಗ್ ದಿಗ್ಗಜ, ಮೂರು ಬಾರಿ ಮೋಟೊಜಿಪಿ ವಿಶ್ವ ಚಾಂಪಿಯನ್ ಹಾಗೂ ಮೋಟೊಜಿಪಿ ಹಾಲ್ ಆಫ್ ಫೇಮ್ ಸದಸ್ಯ ಫ್ರೆಡ್ಡಿ ಸ್ಪೆನ್ಸರ್ ಅವರು ಹಾಜರಾಗಲಿದ್ದಾರೆ. ಬೆಂಗಳೂರಿನ ಅನೀಶ್‌ ಶೆಟ್ಟಿ ಅವರು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ನ ಅಂತಿಮ ಸುತ್ತಿನಲ್ಲಿ ಮನ್ನಡೆಯಲ್ಲಿದ್ದಾರೆ.
ಹೊಸಬರು ತಮ್ಮ ಮೊದಲ ವೇದಿಕೆಯ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದರೆ, ಅನುಭವಿ ಚಾಲಕರು ಚಾಂಪಿಯನ್ ಪಟ್ಟಕ್ಕಾಗಿ ಕಾದು ನೋಡುತ್ತಿದ್ದಾರೆ. ಎಲ್‌ಜಿಬಿ ಫಾರ್ಮುಲಾ 4, ಜೆಕೆ ಟೈರ್ ನವೀಸ್ ಕಪ್, ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ಹಾಗೂ ಹೊಸದಾಗಿ ಪರಿಚಯಿಸಲಾದ ಜೆಕೆ ಟೈರ್ ಲೆವಿಟಾಸ್ ಕಪ್‌ಗಳಲ್ಲಿ ರೋಮಾಂಚನಕಾರಿ ಸ್ಪರ್ಧೆಗಳು ನಡೆಯಲಿವೆ. ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025ರ ಭಾಗವಾಗಿರುವ ಎಫ್‌ಐಎ ಪ್ರಾಮಾಣೀಕೃತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿಗೆ ಸಾಕ್ಷಿಯಾಗಲಿದೆ.
ಭಾರತದ ಅತ್ಯಂತ ಸ್ಪರ್ಧಾತ್ಮಕ ಸಿಂಗಲ್ ಸೀಟರ್ ವಿಭಾಗವಾದ ಎಲ್‌ಜಿಬಿ ಫಾರ್ಮುಲಾ 4, ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಅತ್ಯಂತ ಹಳೆಯ ಹಾಗೂ ಪ್ರಮುಖ ವರ್ಗವಾಗಿದೆ. ಇದು ಕಾರ್ಟಿಂಗ್ ಮತ್ತು ಫಾರ್ಮುಲಾ ರೇಸಿಂಗ್ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತದೆ. ಎರಡನೇ ಸುತ್ತಿನ ನಂತರ ದಿಲ್ಜಿತ್ ಟಿ.ಎಸ್ (ಡಾರ್ಕ್ ಡಾನ್ ರೇಸಿಂಗ್) 53 ಅಂಕಗಳೊಂದಿಗೆ ಮುನ್ನಡೆದಲ್ಲಿದ್ದಾರೆ. ಧ್ರುವ್ ಗೋಸ್ವಾಮಿ (ಎಂಸ್ಪೋರ್ಟ್ ರೇಸಿಂಗ್) 45 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) 28 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕೊಯಮತ್ತೂರಿನ ಕಾರಿ ಟ್ರ್ಯಾಕ್‌ನಲ್ಲಿ ನಡೆಯುವ ಅಂತಿಮ ಸುತ್ತಿನಲ್ಲಿ ಯಾರು ರಾಷ್ಟ್ರ ಚಾಂಪಿಯನ್ ಪಟ್ಟವನ್ನು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ.

ಎಫ್‌ಐಎ ಮಾನ್ಯತೆ ಪಡೆದ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ನ ಉಪಸಮಾರೋಪ ಸುತ್ತಿನಲ್ಲಿ ಕೆನ್ಯಾದ ಶೇನ್ ಚಂದಾರಿಯಾ (ಚೆನ್ನೈ ಟರ್ಬೋ ರೈಡರ್ಸ್), ಫ್ರಾನ್ಸ್‌ನ ಸಾಚೆಲ್ ರೋಟ್ಜ್ (ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು), ದಕ್ಷಿಣ ಆಫ್ರಿಕಾದ ಲುವಿವೆ ಸಾಂಬುಡ್ಲಾ (ಗೋವಾ ಏಸಸ್ ಜೆಎ ರೇಸಿಂಗ್), ಭಾರತದ ಇಶಾನ್ ಮಾದೇಶ್ (ಕೊಲ್ಕತ್ತಾ ರಾಯಲ್ ಟೈಗರ್ಸ್) ಹಾಗೂ ಸಾಯಿಶಿವ ಶಂಕರನ್ (ಸ್ಪೀಡ್ ಡೀಮನ್ಸ್ ದೆಹಲಿ) ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!