ಉದಯವಾಹಿನಿ, ಕೋಲ್ಕತಾ: ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್‌ ಸರಣಿಯಲ್ಲಿ ಹೀನಾಯವಾಗಿ ಸೋತು, ಭಾರೀ ಮುಖಭಂಗ ಅನುಭವಿಸಿದ್ದ ಭಾರತ ತಂಡ ಈ ಬಾರಿ ವಿಶ್ವ ಚಾಂಪಿಯನ್‌ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಎಚ್ಚರಿಕೆ ಹೆಜ್ಜೆಯನ್ನಿಡಲು ಮುಂದಾಗಿದೆ. ಸರಣಿಗೆ ಸಂಪೂರ್ಣ ಸ್ಪಿನ್‌ ಸ್ನೇಹಿ ಪಿಚ್‌ ಸಿದ್ಧಪಡಿಸುವ ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೌದು, ಕಿವೀಸ್‌ ವಿರುದ್ಧದ ತವರಿಗೆ ಸರಣಿಗೆ ಸ್ಪಿನ್‌ ಪಿಚ್‌ ನಿರ್ಮಿಸಿತ್ತು. ಆದರೆ ಭಾರತವನ್ನು ಕಿವೀಸ್‌ ಇನ್ನಿಲ್ಲದಂತೆ ಕಾಡಿತ್ತು. ಅಂದಿನ ಮುಖಭಂಗದಿಂದ ಪಾಠ ಕಲಿತಂತಿರುವ ಭಾರತ, ಈ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ಪಿನ್‌ ಪಿಚ್‌ ಬದಲು ಸ್ಪರ್ಧಾತ್ಮಕ ಪಿಚ್‌ನಲ್ಲೇ ಆಡುವ ಸಾಧ್ಯತೆ ಇದೆ. ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ಸ್ಪಿನ್‌ ಪಿಚ್‌ಗೆ ಭಾರತ ಬೇಡಿಕೆ ಇಟ್ಟಿಲ್ಲ ಎಂದು ಸ್ವತಃ ಬಂಗಾಳ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ. ಅಲ್ಲದೆ, ಅಲ್ಲಿನ ಪಿಚ್ ಕ್ಯುರೇಟರ್‌ ಸುಜನ್‌ ಮುಖರ್ಜಿ ಪ್ರಕಾರ, ಕೋಚ್‌ ಗೌತಮ್ ಗಂಭೀರ್‌ ಅವರು ಈಗಿರುವ ಸ್ಪರ್ಧಾತ್ಮಕ ಪಿಚ್‌ ಬಗ್ಗೆ ತೃಪ್ತರಾಗಿದ್ದಾರೆ.
ಮೊದಲ ಪಂದ್ಯದಲ್ಲಿ ಸ್ಪಿನ್‌ ಪಿಚ್‌ ಬದಲು ಸ್ಪರ್ಧಾತ್ಮಕ ಪಿಚ್‌ ಬಳಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಪಿಚ್‌ನಲ್ಲಿ ಆರಂಭದಲ್ಲಿ ಬ್ಯಾಟರ್‌ಗಳು, ವೇಗಿಗಳು ನೆರವು ಪಡೆದರೆ, 3 ದಿನಗಳ ಬಳಿಕ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನು, 2ನೇ ಟೆಸ್ಟ್‌ ನಡೆಯಲಿರುವ ಗುವಾಹಟಿಯಲ್ಲೂ ಭಾರತ ಸ್ಪಿನ್‌ ಪಿಚ್‌ ಬದಲು ಸ್ಪರ್ಧಾತ್ಮಕ ಪಿಚ್‌ನಲ್ಲೇ ಆಡುವ ಸಾಧ್ಯತೆ ಇದೆ.
ಪ್ರವಾಸಿ ತಂಡದಲ್ಲಿ ಮೂವರು ಸ್ಪಿನ್ನರ್‌: ಭಾರತದಲ್ಲಿ ಹೆಚ್ಚಿನ ಪಿಚ್‌ಗಳು ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದಾಗಿ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಮೂವರು ಪ್ರಮುಖ ಸ್ಪಿನ್ನರ್‌ಗಳನ್ನು ಭಾರತದ ಸರಣಿಗೆ ಆಯ್ಕೆ ಮಾಡಿದೆ. ಕೇಶವ್‌ ಮಹಾರಾಜ್‌, ಸಿಮೋನ್‌ ಹಾರ್ಮರ್‌ ಜೊತೆಗೆ ಸೆನುರಾನ್‌ ಮುತ್ತುಸ್ವಾಮಿ ತಂಡದಲ್ಲಿದ್ದಾರೆ. ಈ ಮೂವರೂ ಇತ್ತೀಚೆಗೆ ಪಾಕಿಸ್ತಾನ ಸರಣಿಯಲ್ಲಿ ಮಾರಕ ದಾಳಿ ಸಂಘಟಿಸಿ, 2 ಟೆಸ್ಟ್‌ನಲ್ಲಿ ಒಟ್ಟು 33 ವಿಕೆಟ್‌ ಪಡೆದಿದ್ದರು. ಪಿಚ್ ಮೊದಲ ಎರಡು ದಿನ ವೇಗಿಗಳಿಗೆ ನೆರವಾದರೂ, ಸ್ಪಿನ್ನರ್‌ಗಳೇ ಪಂದ್ಯದ ಗತಿ ನಿರ್ಧರಿಸಲಿದ್ದಾರೆ. ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ ತ್ರಿವಳಿಗಳ ಮೇಲೆ ಭಾರತ ಭರವಸೆ ಇಟ್ಟಿದೆ.

Leave a Reply

Your email address will not be published. Required fields are marked *

error: Content is protected !!