ಉದಯವಾಹಿನಿ, ಬೆಂಗಳೂರು : ಸಂಪುಟ ಪುನಾರಚನೆ, ಪವರ್ ಶೇರಿಂಗ್ ಎಲ್ಲವನ್ನು ತೀರ್ಮಾನ ಮಾಡುವುದು ಹೈಕಮಾಂಡ್. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಎಂದು ಕಾದು ನೋಡೋಣ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡಿರುವ ಸುದ್ದಿ ಬಗ್ಗೆ ಕೇಳಿದಾಗ, “ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಇದು ಸಿಎಂ ಹಾಗೂ ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ. ಕಾದು ನೋಡೋಣ” ಎಂದರು.
ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಚರ್ಚೆ ಇದೆಯಲ್ಲ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಏನೇ ಇದ್ದರೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆಯೇ ಹೊರತು ಬೇರೆಯವರಲ್ಲ” ಎಂದು ಪ್ರತಿಕ್ರಿಯಿಸಿದರು.
ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ದೆಹಲಿಗೆ ಹೋಗಿದ್ದು, ನೀವೂ ತೆರಳುತ್ತಿರುವ ಕಾರಣ ಎಂದು ಕೇಳಿದಾಗ, ನಾನು ಈಗಾಗಲೇ ದೆಹಲಿಗೆ ತೆರಳಿರುವುದಾಗಿ ಮಾಧ್ಯಮಗಳು ಪ್ರಕಟಿಸಿವೆ. ನಾನು ದೆಹಲಿಗೆ ಹೋಗುವುದು ಹೊಸತಲ್ಲ. ಶಿವಕುಮಾರ್ ಅವರು ಅವರ ಕೆಲಸದ ಮೇಲೆ ಹೋಗಿದ್ದಾರೆ, ನನ್ನ ಪಾಡಿಗೆ ನಾನು ಹೋಗುತ್ತಿರುವೆ” ಎಂದು ತಿಳಿಸಿದರು. ದೆಹಲಿಗೆ ಹೋದಾಗ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ದೆಹಲಿಗೆ ಹೋದಾಗ ಅವಕಾಶ ಸಿಕ್ಕರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತೇನೆ” ಎಂದರು.

Leave a Reply

Your email address will not be published. Required fields are marked *

error: Content is protected !!