ಉದಯವಾಹಿನಿ, ಬೆಂಗಳೂರು: ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪರಿಷೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿ ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯವು ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್‌ ದೀಪಗಳೊಂದಿಗೆ ಕಂಗೊಳಿಸುತ್ತಿವೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ರೈತರು ಹಾಗೂ ವ್ಯಾಪಾರಿಗಳು ಕಡಲೆಕಾಯಿಯೊಂದಿಗೆ ಆಗಮಿಸಿ ಮಳಿಗೆಗಳನ್ನು ತೆರೆದಿದ್ದಾರೆ. ಕಡಲೆಕಾಯಿಗಳ ಜತೆಗೆ ಕಡ್ಲೆಪುರಿ, ಬೆಂಡು-ಬತ್ತಾಸು, ಆಟಿಕೆಗಳು, ತರಹೇವಾರಿ ಸಾಮಗ್ರಿಗಳ ಮಾರಾಟ ಮತ್ತು ಖರೀದಿ ಜೋರಾಗಿ ನಡೆದಿದೆ. ಶನಿವಾರದಿಂದಲೇ ಪರಿಷೆ ಕಳೆಗಟ್ಟಿದೆ. ಈ ಬಾರಿ ಪರಿಷೆಯು ವಿಧ್ಯುಕ್ತ ಆರಂಭಕ್ಕೆ ಮುನ್ನವೇ ವೀಕೆಂಡ್‌ ಬಂದುದರಿಂದ, ಬಸವನಗುಡಿಯಲ್ಲಿ ಶನಿವಾರ- ಭಾನುವಾರ ಜನಕಿಕ್ಕಿರಿದು ನೆರೆದಿದ್ದರು.
ಈ ಬಾರಿ 5 ಬಸವಣ್ಣಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲಾಗುತ್ತಿದೆ. ಜತೆಗೆ ಬಸವನಗುಡಿ ರಸ್ತೆಗೆ ಸೀಮಿತವಾಗಿದ್ದ ಅಲಂಕಾರವನ್ನು ಗಾಂಧಿ ಬಜಾರ್‌, ಎನ್‌.ಆರ್‌. ರಸ್ತೆ ಸೇರಿ ಸುತ್ತಮುತ್ತಲ ರಸ್ತೆಗಳಿಗೆ ವಿಸ್ತರಿಸಲಾಗಿದೆ.
ಈವರೆಗೂ ಮೂರು ದಿನಗಳ ಕಾಲ ನಡೆಯುತ್ತಿದ್ದ ಬಸವನಗುಡಿ ಕಡಿಲೆಕಾಯಿ ಪರಿಷೆಯನ್ನು ಈ ವರ್ಷದಿಂದ ಐದು ದಿನಗಳಿಗೆ ವಿಸ್ತರಿಸಲಾಗಿದೆ. ಕಾರ್ತಿಕ ಮಾಸದ ಕಡೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಅದರಂತೆ ಈ ಬಾರಿ ನ.17 ರಂದು ಪರಿಷೆ ಆರಂಭವಾದರೆ, ನ.21ರವರೆಗೆ ನಡೆಯಲಿದೆ. ಮೈಸೂರು ದಸರಾ ಮಾದರಿಯಲ್ಲಿ ಇಡೀ ಬಸವನಗುಡಿ ಕಂಗೊಳಿಸುತ್ತಿದೆ. ಈ ಬಾರಿ ವಿಜೃಂಭಣೆಯಿಂದ ಪರಿಷೆ ಆಚರಿಸಲಾಗುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!