ಉದಯವಾಹಿನಿ, ಕೊಪ್ಪಳ: ಹಣ ಮರಳಿ ಕೊಡುವ ನೆಪದಲ್ಲಿ ಕರೆಸಿಕೊಂಡು ನಾಲ್ವರು ಕಾಮುಕರು ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ ಈ ಭಯಾನಕ ಘಟನೆ ನಡೆದಿದೆ. 39 ವರ್ಷದ ಮಹಿಳೆಯೊಬ್ಬರ ಮೇಲೆ ನಾಲ್ವರು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಸಂತ್ರಸ್ತ ಮಹಿಳೆ ಹೊಸಪೇಟೆ ಮೂಲದವರಾಗಿದ್ದು, ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತ ಮಹಿಳೆಗೆ ಪರಿಚಯವಿರುವ ಗಜೇಂದ್ರಗಡ ಮೂಲದ ಲಕ್ಷ್ಮಣ ಎಂಬವನು 5000 ರೂಪಾಯಿ ಹಣ ಕೊಡಬೇಕಾಗಿತ್ತು. ಹಣ ಕೊಡುತ್ತೇನೆ ಎಂದು ಲಕ್ಷ್ಮಣ ಆಕೆಯನ್ನು ಕುಷ್ಟಗಿ ಪಟ್ಟಣಕ್ಕೆ ಕರೆಸಿಕೊಂಡಿದ್ದ. ಆದರೆ ಅಲ್ಲಿ ಹಣ ಕೊಡುವ ಬದಲು ಮೋಸ ಮಾಡಿದ್ದಾನೆ. ಸಂತ್ರಸ್ತೆ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಲಕ್ಷ್ಮಣ ಆಕೆಯನ್ನು ಬೈಕ್‌ನಲ್ಲಿ ಕರೆದೊಯ್ದು ಮದ್ಲೂರ ಗ್ರಾಮದ ಬಳಿ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇನ್ನು ಮೂವರು ಸೇರಿಕೊಂಡಿದ್ದಾರೆ. ಅವರು ಮಹಿಳೆಗೆ ಜ್ಯೂಸ್ ಎಂದು ಹೇಳಿ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ನಂತರ ನಾಲ್ವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಕುಷ್ಟಗಿ ಮತ್ತು ಮದ್ಲೂರ ಸೀಮೆಯಲ್ಲಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
