ಉದಯವಾಹಿನಿ, ಮೈಸೂರು: ಹುಲಿ ಹಿಡಿಯುವ ನೆಪದಲ್ಲಿ ಸರ್ಕಾರಿ ಹಣ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಕಳೆದ ಒಂದು ತಿಂಗಳಿನಿಂದ ಬಂಡಿಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದ್ದ ಹುಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಸುಮಾರು 10 ಹುಲಿಗಳನ್ನು ಸೆರೆ ಹಿಡಿಯಲಾಗಿದ್ದು, ಇದಕ್ಕಾಗಿ ಸಮಿತಿಯನ್ನು ರಚಿಸಲಾಗಿತ್ತು.ಈಗಾಗಲೇ ಇದರ ಕಾರ್ಯಾಭಾರ ಮುಕ್ತಾಯವಾದ ನಂತರವೂ ಯಾವುದೇ ಆದೇಶ ಪಡೆಯದೇ ಡ್ರೋನ್ ಕ್ಯಾಮೆರಾ ಬಳಸುವುದು, ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಹಣ ದುರುಪಯೋಗವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹುಲಿ ಹಾಗೂ ವನ್ಯ ಪ್ರಾಣಿಗಳನ್ನು ಹಿಡಿಯುವ ಸಂದರ್ಭದಲ್ಲಿ ವೈದ್ಯರು, ಕಾಡುಪ್ರಾಣಿ ತಜ್ಞರು, ತಂತ್ರಜ್ಞಾನ ಪರಿಣಿತರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ. ಆದರೆ ಈಗ ಯಾವುದೇ ಸಮಿತಿ ಇಲ್ಲ. ಸಾಮಾನ್ಯವಾಗಿ ಹುಲಿಗಳು ಅರಣ್ಯದಂಚಿನಲ್ಲಿ ಓಡಾಡುವುದು ಸಾಮಾನ್ಯವಾಗಿರುತ್ತದೆ. ಸಹಜವಾಗಿ ಆಹಾರ ಹುಡುಕಿಕೊಂಡು ಮತ್ತೊಂದೆಡೆ ಹೋಗುತ್ತದೆ.ಕೆಲ ಗ್ರಾಮಗಳು ಕಾಡಂಚಿನಲ್ಲೇ ಇರುವುದರಿಂದ ಹುಲಿಗಳು ಕಂಡುಬರುವುದು ಸಾಮಾನ್ಯವಾಗಿರುತ್ತದೆ. ಆದರೆ ಅದರಿಂದ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಸ್ಥಳೀಯ ಜನರಿಗೆ ಭೀತಿ ಇರುತ್ತದೆ. ಕಾಡುಪ್ರಾಣಿಗಳು ಏಕಾಏಕಿ ನಾಡಿಗೆ ಬರುವುದಿಲ್ಲ. ಆಹಾರ ಅರಸಿ ಅಥವಾ ದಾರಿ ತಪ್ಪಿ ಬರಬಹುದು.
