ಉದಯವಾಹಿನಿ, ಪ್ಯಾರಿಸ್: ಪ್ಯಾರಿಸ್ ಒಪ್ಪಂದದ ಅಡಿ ತನ್ನ ರಾಷ್ಟ್ರೀಯ ಹವಾಮಾನ ಬದ್ಧತೆಯ ಭಾಗವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಪ್ರಸ್ತುತ ಗಡುವುಗಳಿಗಿಂತ ಬಹಳ ಮುಂಚಿತವಾಗಿ ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಬೇಕಿದೆ. ಭಾರತವೂ 2035ರ ಅವಧಿಗೆ ತನ್ನ ಪರಿಷ್ಕೃತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್ಡಿಸಿ)ಯನ್ನು ಡಿಸೆಂಬರ್ ವೇಳೆಗೆ ಸಲ್ಲಿಸಲಿದೆ ಎಂದು ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ಕಾಪ್30 ಹವಾಮಾನ ಶೃಂಗಸಭೆಯ ಉನ್ನತ ಮಟ್ಟದ ವಿಭಾಗವನ್ನು ಉದ್ದೇಶಿಸಿ ಮಾತನಾಡಿದ ಯಾದವ್, ಹವಾಮಾನ ಬದಲಾವಣೆಯು, ’ನಿಜ ಮತ್ತು ಸನ್ನಿಹಿತವಾದದ್ದು’, ಇದು ಸುಸ್ಥಿರವಲ್ಲದ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಾದರಿಗಳಿಂದ ಮುನ್ನಡೆಸಲ್ಪಡುತ್ತದೆ ಎಂದರು.
ಶೃಂಗಸಭೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ, ಕೈಗಾರಿಕಾ ಪರಿವರ್ತನೆಯನ್ನು ವೇಗಗೊಳಿಸಲು ಜಾಗತಿಕ ಪಾಲುದಾರಿಕೆಗಳ ಅಗತ್ಯವನ್ನು ಒತ್ತಿ ಹೇಳಿದರು. ಕೈಗಾರಿಕಾ ಉಪ – ಉತ್ಪನ್ನಗಳಿಂದ ಮೌಲ್ಯ ಸೃಷ್ಟಿಯ ಮೇಲೆ ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ಯೋಜನೆಗಳನ್ನು ಘೋಷಿಸಿದರು. ಅಭಿವೃದ್ಧಿ ಹೊಂದಿದ ದೇಶಗಳು ಪ್ರಸ್ತುತ ಗುರಿಯ ದಿನಾಂಕಗಳಿಗಿಂತ ಬಹಳ ಮುಂಚೆಯೇ ನಿವ್ವಳ ಶೂನ್ಯವನ್ನು ತಲುಪಬೇಕಿದೆ. ಪ್ಯಾರಿಸ್ ಒಪ್ಪಂದದ ಆರ್ಟಿಕಲ್ 9.1 ರ ಅಡಿ ನಮ್ಮ – ನಮ್ಮ ಬಾಧ್ಯತೆಗಳನ್ನು ಪೂರೈಸಬೇಕು. ಟ್ರಿಲಿಯನ್ಗಟ್ಟಲೆ ಡಾಲರ್‌ಗಳಲ್ಲಿ ಅಂದಾಜಿಸಲಾದ ಹೊಸ, ಹೆಚ್ಚುವರಿ ಮತ್ತು ರಿಯಾಯಿತಿ ಹವಾಮಾನ ಹಣಕಾಸು ಒದಗಿಸಬೇಕು. ಹವಾಮಾನ ಗುರಿಗಳ ಅನುಷ್ಠಾನವು ಸಮರ್ಪಕವಾಗಿರಬೇಕು, ಸುಲಭವಾಗಿ ಲಭ್ಯವಿರಬೇಕು ಮತ್ತು ಕೈಗೆಟುಕುವಂತಿರಬೇಕು ಮತ್ತು ನಿರ್ಬಂಧಿತ ಬೌದ್ಧಿಕ ಆಸ್ತಿ ಅಡೆತಡೆಗಳಿಂದ ಮುಕ್ತವಾಗಿರಬೇಕು ಎಂದರು.
ಭಾರತದ ಗುರಿಯ ಕುರಿತು ಮಾತನಾಡಿದ ಅವರು, ಹೊಸದಾಗಿ ಪ್ರಾರಂಭಿಸಲಾದ ಪರಮಾಣು ಮಿಷನ್ ಮತ್ತು ಹಸಿರು ಹೈಡ್ರೋಜನ್ ಮಿಷನ್ 2070ರ ವೇಳೆಗೆ ನಿವ್ವಳ ಶೂನ್ಯದತ್ತ ತೆರಳಬೇಕಿದ್ದು, ಮತ್ತಷ್ಟು ವೇಗಗೊಳಿಸುತ್ತದೆ. ನಾವು 2035ರವರೆಗಿನ ನಮ್ಮ ಪರಿಷ್ಕೃತ ಎನ್ಡಿಸಿಗಳನ್ನು ಮತ್ತು ಮೊದಲ ದ್ವೈವಾರ್ಷಿಕ ಪಾರದರ್ಶಕತೆ ವರದಿಯನ್ನು ಸಹ ಬಿಡುಗಡೆ ಮಾಡುತ್ತೇವೆ ಎಂದರು.
