ಉದಯವಾಹಿನಿ, ಶ್ರೀನಗರ: ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್ 10ರಂದು ನಡೆದ ಬಾಂಬ್ ಸ್ಫೋಟದಲ್ಲಿ 13 ಮಂದಿ ಬಲಿಯಾಗಿದ್ದು, ಈ ಘಟನೆಯ ಆಘಾತದಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲದ ಡಾ. ಉಮರ್ ಮೊಹಮ್ಮದ್ ಚಲಾಯಿಸುತ್ತಿದ್ದ ಹ್ಯುಂಡೈ ಐ20 ಕಾರ್ ಮೆಟ್ರೋ ಸ್ಟೇಷನ್ ಬಳಿ ಸ್ಫೋಟಗೊಳ್ಳುವ ಮೂಲಕ ಉಗ್ರ ಕೃತ್ಯ ಮತ್ತೊಮ್ಮೆ ಬಟಾ ಬಯಾಲಾಗಿದೆ. ಈಗಾಗಲೇ ಕಾರು ಚಲಾಯಿಸುತ್ತಿದ್ದ ಆತ್ಮಹತ್ಯಾ ಬಾಂಬರ್ ಡಾ. ಉಮರ್ ಮೊಹಮ್ಮದ್ ಎನ್ನುವುದು ಡಿಎನ್‌ಎ ಟೆಸ್ಟ್ ಮೂಲಕ ಸಾಬೀತಾಗಿದೆ. ಇದೀಗ ಉಮರ್ ಕುರಿತಾದ ಒಂದೊಂದೇ ಮಾಹಿತಿ ತನಿಖೆ ವೇಳೆ ಹೊರ ಬೀಳುತ್ತಿದೆ. ಉಮರ್ ಬಾಂಬ್ ಸ್ಫೋಟಕ್ಕೂ ಮುನ್ನ ಪುಲ್ವಾಮಾದಲ್ಲಿರುವ ತನ್ನ ಮನೆಗೆ ತೆರಳಿ ಸಹೋದರನಿಗೆ ಮೊಬೈಲ್ ಫೋನ್ ನೀಡಿ ಅದನ್ನು ನಾಶಪಡಿಸುವಂತೆ ಸೂಚಿಸಿದ್ದ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ತನ್ನ ಬಗ್ಗೆ ಸುದ್ದಿ ಏನಾದರೂ ಬಂದರೆ ಮೊಬೈಲ್ ಫೋನ್ ನೀರಿಗೆ ಎಸೆದು ನಾಶಪಡಿಸುವಂತೆ ಉಮರ್ ತನ್ನ ಸಹೋದರ ಝಹೂರ್ ಇಲ್ಲಾಹಿಗೆ ತಿಳಿಸಿದ್ದ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಇಲ್ಲಾಹಿ ಆರಂಭದಲ್ಲಿ ತನಗೆ ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಲೇ ಬಂದಿದ್ದ. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಮೊಬೈಲ್ ಫೋನ್ ಗುಟ್ಟು ಬಿಟ್ಟು ಕೊಟ್ಟಿದ್ದಾನೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
