ಉದಯವಾಹಿನಿ, ಮುಂಬೈ(ಮಹಾರಾಷ್ಟ್ರ): ಇರಾನ್‌ನ ಬಂದರುಗಳಲ್ಲಿ ಸಂವಹನ ಸಂಪರ್ಕ ಸ್ಥಗಿತಗೊಂಡಿರುವುದರಿಂದ ಅಲ್ಲಿ ಭಾರತೀಯ ನಾವಿಕರು ಸಂಕಷ್ಟದಲ್ಲಿ ಸಿಲುಕಿದ್ದು, ಅವರ ಕುಟುಂಬಗಳು ತೀವ್ರ ಆತಂಕಕ್ಕೊಳಗಾಗಿವೆ. ಇದರ ನಡುವೆ, ಭಾರತೀಯ ನೌಕಾಪಡೆ ಗಲ್ಫ್ ದೇಶಗಳಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಎರಡು ಪ್ರಯಾಣಿಕ ಹಡಗುಗಳನ್ನು ಸನ್ನದ್ಧವಾಗಿಸಿದೆ.

ನೌಕಾಸೇನೆಯ ಮಾಹಿತಿ ಪ್ರಕಾರ, ಎಂವಿ ಸ್ವರಾಜ್ ದೀಪ್ ಮತ್ತು ಎಂವಿ ನಳಂದ ಎಂಬೆರಡು ಪ್ರಯಾಣಿಕ ಹಡಗುಗಳನ್ನು ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದಲ್ಲಿ ಸಿದ್ಧವಾಗಿ ಇರಿಸಲಾಗಿದ್ದು, ಪರಿಸ್ಥಿತಿ ಬಿಗಡಾಯಿಸಿದರೆ ದುಬೈ ಮತ್ತು ಹತ್ತಿರದ ಪ್ರದೇಶಗಳಿಂದ ಭಾರತೀಯ ನಿವಾಸಿಗಳನ್ನು ಸ್ಥಳಾಂತರಿಸಲು ನಿಯೋಜಿಸಲಾಗುತ್ತದೆ. ಇರಾನಿನ ಅಧಿಕಾರಿಗಳು ಎಲ್ಲಾ ಬಂದರುಗಳಲ್ಲಿ ಸಿಗ್ನಲ್ ಜಾಮರ್‌ಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ಸಿಕ್ಕಿಬಿದ್ದ ನಾವಿಕರೊಂದಿಗೆ ಸಂವಹನವನ್ನು ನಿರ್ಬಂಧಿಸಲಾಗಿದೆ ಎಂದು ಫಾರ್ವರ್ಡ್ ಸೀಮನ್ಸ್ ಯೂನಿಯನ್ ಆಫ್ ಇಂಡಿಯಾ (ಎಫ್​ಎಸ್​ಯುಐ) ತಿಳಿಸಿದ್ದು, ಆತಂಕ ಹೆಚ್ಚಿಸಿದೆ.

ಎಫ್​ಎಸ್​ಯುಐ ಪ್ರಧಾನ ಕಾರ್ಯದರ್ಶಿ ಮನೋಜ್​ ಯಾದವ್​ ಅವರು ಮಾತನಾಡಿ, “ಈ ಬೆಳವಣಿಗೆಗಳು ನಾವಿಕರ ಕುಟುಂಬಗಳನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಈ ಜಾಮರ್‌ಗಳು ಇರಾನ್‌ನಲ್ಲಿ ಸಿಲುಕಿರುವ ನಾವಿಕರೊಂದಿಗಿನ ಎಲ್ಲಾ ಸಂವಹನವನ್ನು ನಿರ್ಬಂಧಿಸಿವೆ. ಇದು ಉತ್ತಮ ಬೆಳವಣಿಗೆಯಲ್ಲ. ನಾವು ಸಂದೇಶಗಳು, ಫೋಟೋಗಳು ಅಥವಾ ವಿಡಿಯೋಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇರಾನ್ ಬೆಳವಣಿಗೆಗಳು ​ಹೊರ ಪ್ರಪಂಚವನ್ನು ತಲುಪುವುದನ್ನು ತಡೆಯಲು ಸಂವಹನ ನಿರ್ಬಂಧಗೊಳಿಸಿರುವ ಸಾಧ್ಯತೆ ಇದೆ. ಅಲ್ಲಿ ಸಿಕ್ಕಿಬಿದ್ದ ನಾವಿಕರು ಅವರಿಗೆ ಕಳುಹಿಸಲಾಗುತ್ತಿರುವ ಅಗತ್ಯ ಸಾಮಗ್ರಿಯನ್ನು ಪಡೆಯುತ್ತಿದ್ದಾರೆಯೇ ಎಂದು ಮೇಲ್ವಿಚಾರಣೆ ಮಾಡುವ ಎಫ್​ಎಸ್​ಯುಐ ಪ್ರಯತ್ನವೂ ದುರ್ಬಲಗೊಂಡಿದೆ. ನಮಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಸರ್ಕಾರದಿಂದಲೂ ಯಾವುದೇ ಬಲವಾದ ಅಧಿಕೃತ ಹೇಳಿಕೆ ಇಲ್ಲ. ಈ ಕುರಿತು ತುರ್ತು ಸಂದೇಶ ನೀಡಬೇಕು ಎಂದು ಕುಟುಂಬಗಳು ಒತ್ತಾಯಿಸುತ್ತಿವೆ” ಎಂದರು. ಆತಂಕದಲ್ಲಿ ಕುಟುಂಬಗಳು: ಇರಾನ್ ಧ್ವಜ ಹೊತ್ತ ಹಡಗಿನ SAMAD-21 (IMO 8211954)ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನಾವಿಕ ಹಬೀಬ್ ಗಾಜಿ ಎಂಬವರ ಆಪ್ತ ಸ್ನೇಹಿತ ಸಿದ್ಧಾಂತ್ ಮಾನೆ ಮಾತನಾಡಿ, “ಗಾಜಿ ವಾರಗಟ್ಟಲೆ ಯಾವುದೇ ಸಂಪರ್ಕವಿಲ್ಲದೆ ಬಂದರ್ ಅಬ್ಬಾಸ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಆರ್ಥಿಕ ಸಂಕಷ್ಟ ಹೊಂದಿದ್ದು, ಕುಟುಂಬ ಡಿಜಿಟಲ್​ ಸಂವಹನ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಅಧಿಕಾರಿಗಳು ಅವರ ಪರವಾಗಿ ಸಂಪರ್ಕ ಸಾಧಿಸಬೇಕು” ಎಂದು ಒತ್ತಾಯಿಸಿದ್ದಾರೆ. ವಾರದ ಹಿಂದೆ, ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿ ಗಾಜಿ ಸುರಕ್ಷಿತವಾಗಿದ್ದಾರೆ, ಇರಾನ್‌ನ ಬಂದರ್ ಅಬ್ಬಾಸ್‌ನಲ್ಲಿ ಮತ್ತೊಬ್ಬ ಭಾರತೀಯ ನಾವಿಕನೊಂದಿಗೆ ಇದ್ದಾರೆ ಎಂದು ತಿಳಿಸಿತ್ತು. ಆದಾಗ್ಯೂ, ಸಿಗ್ನಲ್ ಜಾಮರ್‌ನಿಂದ ಕಳವಳ ಹೆಚ್ಚಿಸಿವೆ.

Leave a Reply

Your email address will not be published. Required fields are marked *

error: Content is protected !!