
ಉದಯವಾಹಿನಿ, ಇಸ್ಲಾಮಾಬಾದ್: ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ಅಚ್ಚರಿಯ ಘಟನೆಯೊಂದರ ವಿಡಿಯೊ ವೈರಲ್ ಆಗಿದ್ದು ಭಯಾನಕ ದರೋಡೆ ಹೇಗೆ ಸಂಪೂರ್ಣವಾಗಿ ಅನಿರೀಕ್ಷಿತವಾಗಿ ಮಾರ್ಪಟ್ಟಿತು ಎಂಬುದನ್ನು ತೋರಿಸುತ್ತದೆ. ವಿಡಿಯೊದಲ್ಲಿ ಅಂಗಡಿ ಮಾಲೀಕ ತನ್ನ ಪುಟ್ಟ ಮಗಳೊಂದಿಗೆ ಕೌಂಟರ್ ಹಿಂದೆ ಕುಳಿತಿರುವುದು ಕಂಡುಬರುತ್ತದೆ. ಇದ್ದಕ್ಕಿದ್ದಂತೆ ಆಗುಂತಕನೊಬ್ಬ ಒಳಗೆ ಬಂದು, ಬಂದೂಕನ್ನು ತೋರಿಸಿ ಅಂಗಡಿಯವನ ಫೋನ್ ಕಿತ್ತುಕೊಂಡಿದ್ದಾನೆ. ಜತೆಗೆ ಹಣಕ್ಕೂ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ ಅಂಗಡಿಯಾತನ ತಲೆಗೆ ಹೊಡೆದಿದ್ದಾನೆ. ಆದರೆ ಮುಂದೆ ನಡೆದದ್ದೇನು ಎಂಬುದನ್ನು ನೋಡಿದರೆ ಖಂಡಿತಾ ನೀವು ಅಚ್ಚರಿಗೆ ಒಳಗಾಗುತ್ತೀರಿ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಅಂಗಡಿ ಮಾಲಕನಿಗೆ ಹೊಡೆದು ಕಳ್ಳನು ಹಣ ತೆಗೆದುಕೊಳ್ಳುತ್ತಿದ್ದಾಗ ಅಪಾಯದ ಅರಿವಿಲ್ಲದ ಪುಟ್ಟ ಬಾಲಕಿ ದಯೆಯಿಂದ ತನ್ನ ಲಾಲಿಪಾಪ್ ಅನ್ನು ದರೋಡೆಕೋರನಿಗೆ ನೀಡಿದ್ದಾಳೆ. ಇದು ಕಳ್ಳನ ಮನಸ್ಸನ್ನು ಬದಲಾಯಿಸಿದೆ. ಆತನಿಗೆ ಸಿಕ್ಕ ಮೊಬೈಲ್, ಹಣದೊಂದಿಗೆ ಓಡಿ ಹೋಗುವ ಬದಲು ಎಲ್ಲವನ್ನೂ ಅಂಗಡಿ ಮಾಲೀಕನಿಗೆ ಹಿಂದಿರುಗಿಸಿದ್ದಾನೆ.
