ಉದಯವಾಹಿನಿ, ಬೀಜಿಂಗ್: ‘ತೈವಾನ್ ತನ್ನ ಭೂಪ್ರದೇಶ ಎಂದು ಹೇಳಿಕೊಂಡು ಚೀನಾವು ಅದರ ಮೇಲೆ ದಾಳಿ ನಡೆಸಿದರೆ, ಆಗ ತನ್ನ ದೇಶವು ಮಿಲಿಟರಿ ಹಸ್ತಕ್ಷೇಪಕ್ಕೆ ಮುಂದಾಗಬಹುದು’ ಎಂಬ ಜಪಾನ್ ಪ್ರಧಾನಿ ಸನೇ ತಕೈಚಿ ಅವರ ಹೇಳಿಕೆಯು ಚೀನಾವನ್ನು ತೀವ್ರವಾಗಿ ಕೆರಳಿಸಿದೆ.
ಬೀಜಿಂಗ್‌ನಲ್ಲಿರುವ ಜಪಾನ್‌ನ ರಾಯಭಾರಿ ಎದುರು ಮಂಗಳವಾರ ಆಕ್ಷೇಪ ದಾಖಲಿಸಿರುವ ಚೀನಾ, ‘ಜಪಾನ್ ತಕ್ಷಣವೇ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದೆ.
ತೈವಾನ್‌ ವಿಚಾರದಲ್ಲಿ, ಜಪಾನ್-ಚೀನಾ ಮಧ್ಯೆ ತಲೆದೋರಿರುವ ರಾಜತಾಂತ್ರಿಕ ಬಿಕ್ಕಟ್ಟು ಶಮನಕ್ಕೆ ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಮಸಾಕಿ ಕನಾಯಿ ಅವರು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಲಿಯು ಜಿನ್‌ಸಂಗ್ ಜತೆಗೆ ಮಾತುಕತೆ ನಡೆಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಮವೊ ನಿಂಗ್, ‘ಚೀನಾದ ಕುರಿತ ಜಪಾನ್‌ನ ತಪ್ಪಾದ ಹೇಳಿಕೆಯನ್ನು ತಕ್ಷಣವೇ ವಾಪಸ್ ಪಡೆಯುವಂತೆ ಚೀನಾ ಮತ್ತೊಮ್ಮೆ ಒತ್ತಾಯಿಸಿದೆ’ ಎಂದು ತಿಳಿಸಿದರು.

ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿರುವುದರಿಂದ ಸದ್ಯಕ್ಕೆ ಜಪಾನ್ ಪ್ರವಾಸ ಕೈಗೊಳ್ಳದಂತೆ ಚೀನಾವು ತನ್ನ ನಾಗರಿಕರಿಗೆ ಸೂಚಿಸಿದೆ. ಇದರ ಬೆನ್ನಲ್ಲೇ, ಚೀನಿಯರು ಜಪಾನ್ ಪ್ರವಾಸಕ್ಕಾಗಿ ಕಾಯ್ದಿರಿಸಿದ್ದ ಸುಮಾರು 5 ಲಕ್ಷದಷ್ಟು ವಿಮಾನ ಟಿಕೆಟ್‌ಗಳು ರದ್ದುಗೊಂಡಿವೆ ಎಂದು ವಿಮಾನಯಾನ ವಿಶ್ಲೇಷಕ ಲಿ ಹನ್‌ಮಿಂಗ್ ತಿಳಿಸಿರುವುದಾಗಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜಪಾನ್ ಪ್ರವಾಸದ ಟಿಕೆಟ್‌ಗಳನ್ನು (ಡಿಸೆಂಬರ್ 31ರವರೆಗೆ) ರದ್ದುಪಡಿಸಿದರೆ ಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ಚೀನಾದ ವಿಮಾನಯಾನ ಸಂಸ್ಥೆಗಳು ಹೇಳಿವೆ. ಆ್ಯಪ್ ಮೂಲಕ ಜಪಾನ್ ಪ್ರವಾಸಕ್ಕೆ ಟಿಕೆಟ್ ಕಾಯ್ದಿರಿಸುವ ಎಲ್ಲ ಆಯ್ಕೆಗಳನ್ನು ಪ್ರವಾಸಿ ಏಜೆನ್ಸಿಗಳು ರದ್ದುಪಡಿಸಿವೆ.

Leave a Reply

Your email address will not be published. Required fields are marked *

error: Content is protected !!