ಉದಯವಾಹಿನಿ, ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹತಾಶೆಯಿಂದ ತ್ಯಾಗದ ಮಾತು ಆಡುತ್ತಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ತ್ಯಾಗದ ಮಾತು ಆಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಇಂತಹ ಹೇಳಿಕೆ ನೋಡಿದ್ರೆ ಪಾಪ ಅವರು ಹತಾಶೆ ಆಗಿದ್ದಾರೆ. ಅವರು ಪಾಪ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಬಿಹಾರಕ್ಕೆ ಸಾಕಷ್ಟು ದುಡ್ಡು ಕೊಟ್ಟಿದ್ದಾರೆ. ಬಿಹಾರದ ದೊಡ್ಡ ದೊಡ್ಡ ನಾಯಕರು ತಿಂಗಳು ಗಟ್ಟಲೆ ಪ್ರಚಾರ ಮಾಡಿದ್ರು. ಹೀನಾಯವಾಗಿ ಸೋತ್ರು. ಡಿಕೆಶಿ ಭ್ರಮನಿರಸನಾಗಿದ್ದಾರೆ. ಬಿಹಾರದ ಚುನಾವಣೆ ನಂತರ ಸಿದ್ದರಾಮಯ್ಯ ಮುಂದೆ ಹೈಕಮಾಂಡ್ ಸರೆಂಡರ್ ಆಗಿದೆ. ಹೈಕಮಾಂಡ್‌ಗೆ ಏನಾದ್ರು ಗೊಂದಲ ಸೃಷ್ಟಿ ಮಾಡಿದ್ರೆ ಕರ್ನಾಟಕವನ್ನು ಕಳೆದುಕೊಳ್ಳುವ ಆತಂಕ ಇದೆ. ಹೀಗಾಗಿ ಏನು ಮಾತನಾಡುತ್ತಿಲ್ಲ ಎಂದರು.
ಡಿಕೆ ಶಿವಕುಮಾರ್ ಕಡೆ ಶಾಸಕರಿಲ್ಲ, ಗಾಯಬ್ ಆಗಿದ್ದಾರೆ. ನನ್ನ ಉಚ್ಚಾಟನೆ ಮಾಡುವಾಗ ಎರಡೂವರೆ ವರ್ಷ ಬಿಟ್ಟು ಸಿದ್ದರಾಮಯ್ಯ ಇಳಿಯುತ್ತಾರೆ. ಡಿಕೆ ಕಡೆ 60 ಶಾಸಕರು ಇರುತ್ತಾರೆ ಅಂತ ಚರ್ಚೆ ಆಗಿತ್ತು. ಡಿಕೆ ಸಿಎಂ,ವಿಜಯೇಂದ್ರ ಡಿಸಿಎಂ ಆಗುತ್ತಾರೆ ಅಂತ ಹೇಳಿದ್ರು. ಡಿಕೆಶಿ-ವಿಜಯೇಂದ್ರ ನೇತೃತ್ವದಲ್ಲಿ ಸರ್ಕಾರ ಆಗುತ್ತದೆ. ಅದಕ್ಕೆ ನಾನು ತೊಡಕಾಗುತ್ತೇನೆ ಅಂತ ನನ್ನನ್ನ ಉಚ್ಚಾಟನೆ ಮಾಡಿದ್ರು. ಇದನ್ನ ರಾಷ್ಟ್ರೀಯ ನಾಯಕರೇ ನನಗೆ ಹೇಳಿದ್ದಾರೆ. ಡಿಕೆ-ವಿಜಯೇಂದ್ರ ಸರ್ಕಾರ ಮಾಡಿದ್ರೆ ಕರ್ನಾಟಕದಲ್ಲಿ ಗಿಡ, ಮರ, ಬಂಗಾರ, ಬೆಳ್ಳಿ ಉಳಿಯುತ್ತಿರಲಿಲ್ಲ. ಇಬ್ಬರು ಸೇರಿ ಸ್ವಚ್ಛ ಮಾಡುತ್ತಿದ್ದರು. ಪುಣ್ಯಕ್ಕೆ ಆದ್ರೆ ಡಿಕೆಶಿ ಜೊತೆ ಶಾಸಕರು ಇಲ್ಲ. ಉಪಮುಖ್ಯಮಂತ್ರಿ ಆಗುವ ಆಸೆಯಲ್ಲಿದ್ದ ವಿಜಯೇಂದ್ರ ಹತಾಶರಾಗಿದ್ದಾರೆ. ಡಿಕೆ ಶಿವಕುಮಾರ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮನೆ ಮುಂದೆ ಬೊಕ್ಕೆ ಇಟ್ಟುಕೊಂಡು ಇಷ್ಟು ಸಾಧನೆ ಮಾಡಿದ್ದೇನೆ ಅಂತ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ನಾನೇ ಝೀರೋ ಆಗಿದ್ದೇನೆ ಏನು ಮಾಡಲಿ ಅಂತ ಹೇಳುತ್ತಿದ್ದಾರೆ. ಇದು ಕರ್ನಾಟಕದ ಪರಿಸ್ಥಿತಿ ಎಂದು ಕಿಡಿಕಾರಿದರು.
