ಉದಯವಾಹಿನಿ, ಬೆಂಗಳೂರು: ಕಳೆದ ಎರಡು ವರ್ಷದಿಂದ ವಿಪರೀತ ಮಳೆಯಿಂದ ಹಲವಾರು ಬೆಳೆ ನಾಶವಾಗಿದ್ದು, ಬೆಳೆ ನಷ್ಟ ಸರ್ವೆಯಲ್ಲಿ ಲೋಪವಾಗಿದ್ದು, ಕೂಡಲೇ ರಾಜ್ಯಾದ್ಯಂತ ಇದನ್ನು ಸರಿಪಡಿಸಿ ನಷ್ಟ ಆದ ಎಲ್ಲ ರೈತರಿಗೆ Farmers ಬೆಳೆ ಪರಿಹಾರ ಕೊಡಬೇಕು. ಮತ್ತು ಇದಕ್ಕೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಕಳೆದ ಎರಡು ವರ್ಷ ವಿಪರೀತ ಮಳೆ ಬಿದ್ದು ರಾಜ್ಯದ ಬಹುತೇಕ ಬೆಳೆಗಳು ನಾಶವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರೈತರಿಗೆ ಎರಡು ವರ್ಷವೂ ಕೂಡ ನಷ್ಟವಾಗಿದ್ದು, ಮೆಕ್ಕೆಜೋಳ, ಸೊಯಾಬಿನ್, ಹೆಸರು, ಈರುಳ್ಳಿ ಬೆಳೆ ನಾಶವಾಗಿದೆ. ಕಳೆದ ವರ್ಷ ಮಳೆಯಿಂದ ನಷ್ಟವಾದ ಬೆಳೆಗೆ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಮೊನ್ನೆ ತಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಯನ್ನು ಸಲ್ಲಿಸಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ, ವಾಸ್ತವಾಂಶ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಬೆಳೆ ನಷ್ಟ ಪರಿಹಾರ ಸರ್ವೆ ಕಾರ್ಯ ಸಮರ್ಪಕವಾಗಿ ನ್ಯಾಯ ಸಮ್ಮತವಾಗಿ ನಡೆದಿರುವುದಿಲ್ಲ. ಕೃಷಿ, ಕಂದಾಯ ಮತ್ತು ಸಾಂಖಿಕ ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ರೈತರ ಜಮೀನಿನಲ್ಲಿ ಪರೀಕ್ಷೆ ಮಾಡದೇ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಇದರ ಪರಿಣಾಮವಾಗಿ ಹಲವಾರು ತಾಲೂಕುಗಳಲ್ಲಿ ಒಟ್ಟು ಬಿತ್ತನೆಯಾದ ಪ್ರದೇಶದ 10% ರಷ್ಟು ಬೆಳೆ ನಾಶ ಆಗಿಲ್ಲ ಎನ್ನುವ ವರದಿ ಬಂದಿದೆ. ಇದು ಸತ್ಯಕ್ಕೆ ದೂರವಾಗಿರುವಂಥದ್ದು. ಕೆಲವು ತಾಲೂಕುಗಳಲ್ಲಿ ನಷ್ಟವೇ ಆಗಿಲ್ಲ ಎನ್ನುವುದು ಸತ್ಯಕ್ಕೆ ದೂರವಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!