ಉದಯವಾಹಿನಿ, ನವದೆಹಲಿ: ವಿದೇಶದಲ್ಲಿ ಉದ್ಯೋಗ ಅರಸಿ ವಂಚಕರ ಜಾಲಕ್ಕೆ ಸಿಲುಕಿದ್ದ 25 ಕನ್ನಡಿಗರು ಸೇರಿ 125 ಭಾರತೀಯರನ್ನ ರಕ್ಷಣೆ ಮಾಡಿ ತವರಿಗೆ ಕರೆತರಲಾಗಿದೆ. ಸೇನಾ ವಿಮಾನದ ಮೂಲಕ ಥೈಲ್ಯಾಂಡ್ ನಿಂದ ಯುವಕರು ಭಾರತಕ್ಕೆ ವಾಪಸ್ ಆಗಿದ್ದಾರೆ. ಇದರೊಂದಿಗೆ, ಈ ವರ್ಷದ ಮಾರ್ಚ್‌ನಿಂದ ಮಯನ್ಮಾರ್‌ನ ಕಳ್ಳಸಾಗಣೆ ಕೇಂದ್ರಗಳಿಂದ ಒಟ್ಟು 1,500 ಭಾರತೀಯರನ್ನು ಥೈಲ್ಯಾಂಡ್ ಮೂಲಕ ದೇಶಕ್ಕೆ ಮರಳಿ ಕರೆತರಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಆಗ್ನೇಯ ಏಷ್ಯಾದ ಕಳ್ಳಸಾಗಣೆ ಕೇಂದ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಭಾರತ ಸರ್ಕಾರದ ಪ್ರಯತ್ನಗಳ ಭಾಗವಾಗಿ, ಬ್ಯಾಂಕಾಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಥೈಲ್ಯಾಂಡ್‌ನ ಚಿಯಾಂಗ್ ಮಾಯ್ ಪ್ರಾಂತ್ಯದಲ್ಲಿರುವ ಭಾರತೀಯ ದೂತವಾಸವು ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಥಾಯ್ ಸರ್ಕಾರ ಮತ್ತು ಟಕ್ ಪ್ರಾಂತ್ಯದ ವಿವಿಧ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡಿದೆ.
