ಉದಯವಾಹಿನಿ, ಲೋವರ್ ಸ್ಯಾಕ್ಸನಿ (ಜರ್ಮನಿ) : ಜರ್ಮನಿಯ ಲೋವರ್ ಸ್ಯಾಕ್ಸನಿ ರಾಜ್ಯದ ಬ್ರೌನ್ಸ್‌ವಿಕ್, ವೋಲ್ಫ್ಸ್‌ಬರ್ಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರನ್ನು ಒಗ್ಗೂಡಿಸುತ್ತಿರುವ ಬ್ರಾವೋ ಕನ್ನಡ ಬಳಗ ತನ್ನ 6ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 15ರಂದು ವೋಲ್ಫ್ಸ್‌ಬರ್ಗ್‌ನಲ್ಲಿ ವಿಜೃಂಭಣೆಯಿಂದ ಆಚರಿಸಿತು.
ವಿದೇಶದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲಿರುವ ಕನ್ನಡಿಗರ ಪ್ರೀತಿ ಅಚಲವಾಗಿದ್ದು, “ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿಗಟ್ಟನ್ನು ನೆನಪಿಸುವಂತೆ ಹಬ್ಬದ ಉತ್ಸಾಹ ಭಿನ್ನ ಸಂಸ್ಕೃತಿಯ ನೆಲದಲ್ಲೂ ಪ್ರಫುಲ್ಲಿತವಾಗಿ ಅರಳಿದ ದೃಶ್ಯ ಮನಮೋಹಕವಾಗಿತ್ತು.
ಪರಿಸರ ತಾಯಿ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಭಾವನಾತ್ಮಕ ಸ್ಪರ್ಶ ನೀಡಿತು. ಕರ್ನಾಟಕದ ಗೌರವ ಸಾರುವ ಸೌಂದರ್ಯವರ್ಧಕ ಅಲಂಕಾರಗಳು ವಿಶೇಷ ಗಮನ ಸೆಳೆದವು. ಕಾರ್ಯಕ್ರಮದ ವಾತಾವರಣವನ್ನು ಭಾರತದ ಧ್ವಜ, ಕರ್ನಾಟಕ ಧ್ವಜ, ಕಾಂತಾರ ದೈವದ ಚಿತ್ರಗಳು, ಕನ್ನಡ ಪರಂಪರೆಯ ಭಿತ್ತಿಪತ್ರಗಳು ಇತ್ಯಾದಿಗಳು ಅಲಂಕರಿಸಿದ್ದು, ಕನ್ನಡಿಗರ ತಾಯ್ನಾಡಿನ ಮೇಲಿನ ಪ್ರೀತಿ ಸ್ಪಷ್ಟವಾಗಿ ವ್ಯಕ್ತಗೊಂಡಿತು.
ಕಾರ್ಯಕ್ರಮವು ತಾಯಿ ಭುವನೇಶ್ವರಿ ದೇವಿಯ ವಂದನೆ ಮತ್ತು ದೀಪೋತ್ಸವದೊಂದಿಗೆ ಆರಂಭವಾಯಿತು. ನಂತರ ನಡೆದ ನಾಡಗೀತೆ ಗಾನದಲ್ಲಿ ಸುಮಾರು 80ಕ್ಕೂ ಹೆಚ್ಚು ಕನ್ನಡಿಗರು ಗೌರವಪೂರ್ವಕವಾಗಿ ಒಂದಾಗಿ ಪಾಲ್ಗೊಂಡರು. ಬಾಲವಿಕಾಸ ಕೇಂದ್ರದ ಮಕ್ಕಳ ಮಂತ್ರೋಚ್ಚಾರಣೆ ಮತ್ತು ವೇದಪಠಣ ಸಮಾರಂಭಕ್ಕೆ ಮೆರಗು ನೀಡಿತು.
ರಾಜ್ಯೋತ್ಸವದಲ್ಲಿ ವಿವಿಧ ವಯೋಮಾನದ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ಕರ್ನಾಟಕದ 31 ಜಿಲ್ಲೆಗಳ ಪರಿಚಯ, ಭರತನಾಟ್ಯ, ಜನಪದ ನೃತ್ಯ, ಮಕ್ಕಳ ಕೃಷ್ಣಲೀಲೆ ಅಭಿನಯ, ರೆಟ್ರೋ ನೃತ್ಯ, ಹಳೆಯ ಮಧುರ ಗೀತೆಗಳು, ಅದ್ಧರಿ ನೃತ್ಯಗಳು, ದಂಪತಿ ಮತ್ತು ಕುಟುಂಬಗಳ ರಾಂಪ್‌ವಾಕ್ ಸೇರಿದಂತೆ, ಮಕ್ಕಳು ಪ್ರಸಿದ್ಧ ವ್ಯಕ್ತಿಗಳ ವೇಷಭೂಷಣದಲ್ಲಿ ನಡೆಸಿದ ಫ್ಯಾನ್ಸಿ ಡ್ರೆಸ್ ಪ್ರದರ್ಶನ ಎಲ್ಲರ ಗಮನ ಸೆಳೆದವು. ಜೊತೆಗೆ ಸಾಹಿತ್ಯ–ಸಂಸ್ಕೃತಿ ಕುರಿತ ರಸಪ್ರಶ್ನೆ ಮತ್ತು ವೈವಿಧ್ಯಮಯ ಕ್ರೀಡಾ–ಪ್ರದರ್ಶನಗಳು ಪ್ರೇಕ್ಷಕರ ಮನ ಗೆದ್ದವು.

 

Leave a Reply

Your email address will not be published. Required fields are marked *

error: Content is protected !!