ಉದಯವಾಹಿನಿ,ನ್ಯೂಯಾರ್ಕ್(ಯುಎಸ್‌ಎ)​: ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸದೇ ಇದ್ದರೆ ಶೇ.350ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆ. ಇದರ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಶರೀಫ್ ಅವರು ನನಗೆ ಕರೆ ಮಾಡಿ, ನಾವು ಯುದ್ಧ ಮಾಡುವುದಿಲ್ಲ ಎಂದು ಹೇಳಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪುನರುಚ್ಛರಿಸಿದ್ದಾರೆ.

ಈ ವರ್ಷದ ಮೇಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಇರಲಿಲ್ಲ ಎಂದು ಭಾರತ ಹಲವು ಬಾರಿ ಪ್ರತಿಪಾದಿಸಿದೆ. ಇದರ ಬಳಿಕವೂ ಟ್ರಂಪ್ ಇದೀಗ 60ನೇ ಬಾರಿ ತಾವೇ ಈ ಯುದ್ಧ ನಿಲ್ಲಿಸಿದ್ದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಈ ಬಾರಿ ಮೋದಿ ಮತ್ತು ಶರೀಫ್​ ಇಬ್ಬರ ಹೆಸರನ್ನೂ ಅವರು ಉಲ್ಲೇಖಿಸಿದ್ದಾರೆ.

ಯುದ್ಧಗಳನ್ನು ನಿಲ್ಲಿಸುವಲ್ಲಿ ನಾನು ಉತ್ತಮವಾಗಿ ಕೆಲಸ ಮಾಡುತ್ತಿದ್ದೇನೆ. ವರ್ಷಗಳಿಂದ ಈ ರೀತಿಯ ಯುದ್ಧಗಳನ್ನು ನಿಲ್ಲಿಸಿದ್ದೇನೆ. ಈ ಪೈಕಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದೆ ಎಂದಿದ್ದಾರೆ. ಅಮೆರಿಕ-ಸೌದಿ ಅರೇಬಿಯಾ ಹೂಡಿಕೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್​, ಪರಮಾಣು ಶಕ್ತಿ ಹೊಂದಿದ್ದ ಎರಡು ನೆರೆಹೊರೆಯ ದೇಶಗಳು ಯುದ್ಧ ನಡೆಸಲು ಮುಂದಾಗಿದ್ದವು. ನಾನು ಎರಡೂ ದೇಶಗಳ ಮೇಲೆ ಶೇ.350ರಷ್ಟು ಸುಂಕ ವಿಧಿಸುವುದರ ಜೊತೆಗೆ ಅಮೆರಿಕ ನಿಮ್ಮೊಂದಿಗೆ ಯಾವುದೇ ವ್ಯಾಪಾರವನ್ನೂ ಮಾಡುವುದಿಲ್ಲ ಎಂದು ಹೇಳಿದ್ದೆ. ಇದರ ಪರಿಣಾಮಗಳನ್ನು ಅರಿತ ಉಭಯ ದೇಶಗಳು ಯುದ್ಧ ನಿಲ್ಲಿಸುವುದಾಗಿ ಹೇಳಿದವು ಎಂಬುದು ಟ್ರಂಪ್​ ಉವಾಚ.ಅವರಿಬ್ಬರೂ ಪರಸ್ಪರ ಪರಮಾಣು ಶಸ್ತ್ರಾಸ್ತ್ರಗಳನ್ನು ಹಾರಿಸಿ, ಲಕ್ಷಾಂತರ ಜನರನ್ನು ಕೊಂದು ಲಾಸ್ ಏಂಜಲೀಸ್ ಮೇಲೆ ಪರಮಾಣು ಧೂಳು ತೇಲುವಂತೆ ಮಾಡುವುದನ್ನು ನಾನು ಬಯಸುವುದಿಲ್ಲ. ಈ ಹಿನ್ನೆಲೆಯಲ್ಲಿ ಶೇ.350ರಷ್ಟು ಸುಂಕ ವಿಧಿಸುವುದಾಗಿ ಖಜಾನೆ ಕಾರ್ಯದರ್ಶಿ ಸ್ಕಾಟ್​ ಬೆಸೆಂಟ್​ಗೆ ತಿಳಿಸಿದೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಯಾವುದೇ ಅಮೆರಿಕದ ಯಾವುದೇ ಅಧ್ಯಕ್ಷರು ಹೀಗೆ ಮಾಡಿರಲಿಲ್ಲ. ಆದರೆ, ನಾನು ಸುಂಕದ ಮೂಲಕ ಯುದ್ಧ ನಿಲ್ಲಿಸಿದೆ. ಒಟ್ಟು 8ರಲ್ಲಿ ಐದು ಯುದ್ಧವನ್ನು ಸುಂಕದಿಂದಲೇ ನಿಲ್ಲಿಸಿದ್ದೇನೆ ಎಂದಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!